ನವದೆಹಲಿ: ಮುಟ್ಟಿನ ಸುರಕ್ಷತೆ ಹಾಗೂ ಶುಚಿತ್ವದ ವಸ್ತುಗಳ ತಯಾರಿಕೆಗೆ ಸಂಬಂಧಿಸಿದಂತೆ ಹೊಸ ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಸಿದ್ಧತೆ ನಡೆಸಿದೆ.
ಋತುಚಕ್ರಕ್ಕೆ ಸಂಬಂಧಿಸಿದಂತೆ ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಎದುರಾಗಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವುದೇ ಈ ನೀತಿಯ ಹಿಂದಿರುವ ಮೂಲ ಆಶಯವಾಗಿದೆ. ನೈರ್ಮಲ್ಯ ಸೌಲಭ್ಯಗಳ ಸುಧಾರಣೆ, ಸಾಮಾಜಿಕ ನಿಷೇಧಗಳಿಗೆ ಕಡಿವಾಣ ಸೇರಿದಂತೆ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಮೂಲಗಳು ತಿಳಿಸಿವೆ.
ಮುಟ್ಟಿನ ಬಗ್ಗೆ ಸಮಾಜ ತಳೆದಿರುವ ಧೋರಣೆ ಬದಲಾಯಿಸುವುದು ಹಾಗೂ ನೈರ್ಮಲ್ಯಕ್ಕೆ ಹೆಚ್ಚಿ ಆದ್ಯತೆ ನೀಡುವುದು ನೀತಿಯ ಪ್ರಮುಖ ಗುರಿಯಾಗಿದೆ. ಅಲ್ಲದೇ, ಸಮಾಜದಲ್ಲಿ ಲಿಂಗ ಸಮಾನತೆ, ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಇದನ್ನು ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಋತುಚಕ್ರದ ಬಗ್ಗೆ ಇತ್ತೀಚೆಗೆ ಮಹಿಳೆಯರಲ್ಲಿ ಸಾಕಷ್ಟು ಅರಿವು ಮೂಡಿದೆ. ಆದರೆ, ಪ್ರತಿಯೊಬ್ಬರ ವೈಯಕ್ತಿಕ ಅವಶ್ಯಕತೆಯನ್ನು ಪೂರೈಸುವುದಕ್ಕಾಗಿ ಹೆಚ್ಚಿನ ಆರ್ಥಿಕ ಹೂಡಿಕೆಯ ಅಗತ್ಯವಿದೆ. ಹಾಗಾಗಿ, ಶುಚಿತ್ವದ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳ ವೈಯಕ್ತಿಕ ಅಭಿಪ್ರಾಯಗಳನ್ನೂ ಕ್ರೋಡೀಕರಿಸಲಾಗುತ್ತಿದೆ. ಭಾರತವು ಜನಸಂಖ್ಯೆ ಹಾಗೂ ಸ್ಥಳಗಳಲ್ಲಿ ವೈವಿಧ್ಯತೆ ಹೊಂದಿದೆ. ಇದಕ್ಕೆ ಅನುಗುಣವಾಗಿ ನೀತಿ ರೂಪುಗೊಳ್ಳಲಿದೆ ಎನ್ನುತ್ತವೆ ಮೂಲಗಳು.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–4ರ ಅನ್ವಯ ದೇಶದಲ್ಲಿ ಋತುಚಕ್ರದ ಅವಧಿಯಲ್ಲಿ ಶೇ 58ರಷ್ಟು ಮಹಿಳೆಯರಷ್ಟೇ (15ರಿಂದ 24 ವರ್ಷ ವಯೋಮಾನ) ಶುಚಿತ್ವದ ವಿಧಾನ ಅನುಸರಿಸುತ್ತಿದ್ದರು. ಕುಟುಂಬ ಸಮೀಕ್ಷೆ–5ರ ವರದಿ ಅನ್ವಯ ಈ ಪ್ರಮಾಣ ಶೇ 78ಕ್ಕೆ ಏರಿದೆ.
‘ಈ ಪೈಕಿ ಶೇ 64ರಷ್ಟು ಮಹಿಳೆಯರು ಸ್ಯಾನಿಟರಿ ಪ್ಯಾಡ್ ಬಳಸುತ್ತಾರೆ. ಶೇ 50ರಷ್ಟು ಸ್ತ್ರೀಯರು ಬಟ್ಟೆ ಬಳಸಿದರೆ ಶೇ 15ರಷ್ಟು ಮಹಿಳೆಯರು ಸ್ಥಳೀಯವಾಗಿ ತಯಾರಿಸುವ ನ್ಯಾಪ್‌ಕಿನ್‌ಗಳನ್ನು ಬಳಸುತ್ತಾರೆ’ ಎಂದು ಇತ್ತೀಚಿನ ಸಮೀಕ್ಷೆಯ ವರದಿ ತಿಳಿಸಿದೆ.
ಶಾಲೆಗೆ ತೆರಳುವ 12 ವರ್ಷಕ್ಕಿಂತ ಹೆಚ್ಚು ವಯೋಮಾನದ ಹೆಣ್ಣುಮಕ್ಕಳಲ್ಲಿ ಮುಟ್ಟಿನ ಶುಚಿತ್ವ ಕುರಿತು ಅರಿವು ಹೆಚ್ಚಿದೆ. ಆದರೆ, ಶಾಲೆಯಿಂದ ಹೊರಗುಳಿದ ಇದೇ ಪ್ರಾಯದ ಹೆಣ್ಣುಮಕ್ಕಳು ನೈರ್ಮಲ್ಯಕ್ಕೆ ಅಷ್ಟಾಗಿ ಒತ್ತು ನೀಡುತ್ತಿಲ್ಲ ಎಂದು ವರದಿಯು ಕಳವಳ ವ್ಯಕ್ತಪಡಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಮುಟ್ಟಿನ ಶುಚಿತ್ವಕ್ಕೆ ಒತ್ತು ನೀಡುವ ಮಹಿಳೆಯರ ಪ್ರಮಾಣ ಶೇ 73ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಇದು ಶೇ 90ರಷ್ಟಿದೆ. ಅಂದಹಾಗೆ ಕೆಲವು ರಾಜ್ಯಗಳಲ್ಲಿ ಋತುಚಕ್ರದ ಸುರಕ್ಷತೆಗೆ ಸಂಬಂಧಿಸಿದಂತೆ ಇಂದಿಗೂ ಆಶಾದಾಯಕ ಪ್ರಗತಿ ಕಂಡುಬಾರದಿರುವುದು ಆರೋಗ್ಯ ಸಚಿವಾಲಯಕ್ಕೆ ದಿಗಿಲು ಮೂಡಿಸಿದೆ.
ಸದೃಢ ಆರೋಗ್ಯ, ಯೋಗಕ್ಷೇಮ, ಸಮಾನ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಕಾಪಾಡುವುದೇ ಭಾರತದ ಸುಸ್ಥಿರ ಅಭಿವೃದ್ಧಿಯ ಗುರಿಯಾಗಿದೆ. ಹಾಗಾಗಿ, ಮುಟ್ಟಿನ ಕುರಿತ ಹೊಸ ನೀತಿಯನ್ನು ಇದಕ್ಕೆ ಪೂರಕವಾಗಿಯೇ ರೂಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.