ನವಸಾರಿ ಜಿಲ್ಲೆಯ ಖೇರ್‌ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ (ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ) 229 ಮಿ.ಮೀ ಮಳೆಯಾಗಿದೆ. ಅಲ್ಲದೆ, ದಕ್ಷಿಣ ಗುಜರಾತಿನ ಡಾಂಗ್ ಮತ್ತು ತಾಪಿ ಜಿಲ್ಲೆಗಳ 12 ತಾಲ್ಲೂಕುಗಳಲ್ಲಿ 100 ಮಿ.ಮೀಗಿಂತಲೂ ಹೆಚ್ಚಿನ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ಮಾಹಿತಿ ನೀಡಿದೆ.
ನಿರಂತರ ಮಳೆಯಿಂದಾಗಿ ವಲಸಾಡ್ ತಾಲ್ಲೂಕಿನ ಜೌರಂಗ್ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನವಸಾರಿ ಜಿಲ್ಲೆಯಲ್ಲಿ ಕಾವೇರಿ ಮತ್ತು ಅಂಬಿಕಾ ನದಿಗಳ ಪ್ರವಾಹದ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಸುಮಾರು 1,000ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನೀರಿನ ಹೊಂಡದಲ್ಲಿ ಸಿಲುಕಿದ್ದ ಏಳು ಮಂದಿ ಕಾರ್ಮಿಕರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ವಲಸಾದ್ ಜಿಲ್ಲಾಡಳಿತ ತಿಳಿಸಿದೆ.
ಜಲಾವೃತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದು, ಮೃತದೇಹ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಗಾಂದೇವಿ ಶಾಸಕ ನರೇಶ್ ಪಟೇಲ್ ತಿಳಿಸಿದ್ದಾರೆ.
ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮತ್ತು ಮಳೆಯಿಂದಾಗುವ ಆಸ್ತಿ–ಪಾಸ್ತಿ ನಷ್ಟ ಮತ್ತು ಜೀವ ಹಾನಿ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ನವಸಾರಿ ಮತ್ತು ವಲಸಾಡ್ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೂಚಿಸಿದ್ದಾರೆ.