ಜೈಪುರ: ರಾಜಸ್ಥಾನದ ಜೈಸಲ್ಮೇರ್, ಪಾಲಿ, ಜೋಧ್‌ಪುರ ಜಿಲ್ಲೆಗಳಲ್ಲಿ ಮಂಗಳವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಕೆಲವಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮಳೆ ಹೆಚ್ಚಾದ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಪಡೆಯು ಟ್ಯಾಂಕರ್, ಪಂಪ್ ಸೇರಿದಂತೆ ಅಗತ್ಯ ಸಲಕರಣೆಗಳೊಂದಿಗೆ ಜನರಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.
ಜೈಸಲ್ಮೇರ್ ಜಿಲ್ಲೆಯ ಮೋಹನ್‌ಗಡ, ಭಣಿಯಾಣಾದಲ್ಲಿ ಮಂಗಳವಾರ ಒಂದೇ ದಿನ 20 ಸೆಂ.ಮೀ. ಮಳೆಯಾಗಿದೆ. ಪಾಲಿ ಜಿಲ್ಲೆಯಲ್ಲಿ 25 ಸೆಂ.ಮೀ, ಜೋಧ್‌ಪುರ ಜಿಲ್ಲೆಯಲ್ಲಿ 24.6 ಸೆಂ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯ ವಿವಿಧೆಡೆಗಳಲ್ಲೂ ತೀವ್ರ ಮಳೆ ಉಂಟಾಯಿತು ಎಂದು ತಿಳಿಸಿದರು.
ಜೈಸಲ್ಮೇರ್ ಜಿಲ್ಲಾಧಿಕಾರಿ ಪ್ರತಾಪ್‌ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ಅವರು ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿ, ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಂಡರು.
ರಾಜಸ್ಥಾನದ ಪಶ್ಚಿಮ ಭಾಗದಲ್ಲಿ ಬುಧವಾರವೂ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಇಲ್ಲಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಳೆಯಿಂದ ಜೋಧ್‌ಪುರ ಮಾರ್ಗವಾಗಿ ಸಂಚರಿಸುವ ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ವಾಯವ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.