ಶಿಮ್ಲಾ: ರಾಜ್ಯಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ರಾಜೀನಾಮೆ ವದಂತಿ ತಳ್ಳಿಹಾಕಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ರಾಜೀನಾಮೆ ಕೊಡುವಂತೆ ನನ್ನನ್ನು ಯಾರು ಕೇಳಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಹೇಳಿದ್ದರು. ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುಖ್ವಿಂದರ್ ಸಿಂಗ್, ‘ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಹೇಳಿದರು.
‘ಯಾರೂ ನನ್ನ ಬಳಿ ರಾಜೀನಾಮೆ ಕೇಳಿಲ್ಲ, ನಾನು ಯಾರಿಗೂ ರಾಜೀನಾಮೆ ನೀಡಿಲ್ಲ. ಬಹುಮತ ಸಾಬೀತು ಮಾಡುತ್ತೇವೆ. ಆ ಮೂಲಕ ನಾವು ಗೆಲ್ಲುತ್ತೇವೆ... ಹಿಮಾಚಲ ಪ್ರದೇಶದ ಜನರು ಗೆಲ್ಲುತ್ತಾರೆ...’ ಎಂದರು.
ಹಿಮಾಚಲ ಪ್ರದೇಶ ವಿಧಾನಸಭೆಯಿಂದ ರಾಜ್ಯ ಸಭೆಯ ಏಕೈಕ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 6 ಶಾಸಕರು ಅಡ್ಡ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಿದ್ದರು. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಕಳೆದುಕೊಳ್ಳುವ ಆತಂಕ ಕಾಂಗ್ರೆಸ್‌ಗೆ ಎದುರಾಗಿದೆ.
ಹರಿಯಾಣದ ಪಂಚಕುಲದ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದ 6 ಮಂದಿ ಅತೃಪ್ತ ಶಾಸಕರು ಬುಧವಾರ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಉಂಟಾದ ಬಿಕ್ಕಟ್ಟು ಶಮನಗೊಳಿಸಲು ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಿಮ್ಲಾ ತಲುಪಿದ್ದಾರೆ.
ಏತನ್ಮಧ್ಯೆ, ಜೈರಾಮ್ ಠಾಕೂರ್ ನೇತೃತ್ವದ ಬಿಜೆಪಿ ಶಾಸಕಾಂಗ ಪಕ್ಷ ರಾಜ್ಯಪಾಲರನ್ನು ಭೇಟಿಯಾಗಿದೆ.