ನೆರೆರಾಷ್ಟ್ರದ ಹಿಂದೂಗಳು ಸಂಕಷ್ಟದಲ್ಲಿರುವಾಗ ಉಭಯ ದೇಶಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಸುವುದು ಗಾಯದ ಮೇಲೆ ಉಪ್ಪು ಸವರಿದಂತೆ ಎಂದು ಅದು ಹೇಳಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಈ ಕುರಿತು ಮನವಿ ಸಲ್ಲಿಸಿರುವ ಎಚ್‌ಜೆಎಸ್, ಭಾರತ– ಬಾಂಗ್ಲಾದೇಶ ನಡುವಣ ಕ್ರಿಕೆಟ್ ಸರಣಿಯನ್ನು ನಿಲ್ಲಿಸುವಂತೆ ಮತ್ತು ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲುವವರೆಗೂ ಬಾಂಗ್ಲಾದೇಶದ ಕಲಾವಿದರ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬಾರದು ಎಂದಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಾಹಾರ ಸಚಿವ ಎಸ್. ಜೈಶಂಕರ್ ಅವರಿಗೂ ಎಚ್‌ಜೆಎಸ್ ಮನವಿಪತ್ರ ಸಲ್ಲಿಸಿದೆ.
‘ಸೆಪ್ಟೆಂಬರ್ 19ರಿಂದ ಅಕ್ಟೋಬರ್ 12ರ ಅವಧಿಯಲ್ಲಿ ಬಾಂಗ್ಲಾದೇಶದ ಜೊತೆ ಎರಡು ಟೆಸ್ಟ್ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳನ್ನು ಒಳಗೊಂಡ ಕ್ರಿಕೆಟ್ ಸರಣಿ ಆಯೋಜಿಸಲು ಭಾರತವು ನಿರ್ಧರಿಸಿದೆ. ಇದೇ ವೇಳೆ ಬಾಂಗ್ಲಾದೇಶದಲ್ಲಿಯ ಹಿಂದೂ ಸಮುದಾಯವು ಗಂಭೀರ ದಾಳಿಗೆ ಒಳಗಾಗಿದೆ. ಹಿಂದೂ ವಿರೋಧಿ ಹಿಂಸಾಚಾರದಲ್ಲಿ ಈವರೆಗೆ 230 ಜನರು ಮೃತಪಟ್ಟಿರುವುದು ವರದಿಯಾಗಿದೆ. ಇಂಥ ಸಂದರ್ಭದಲ್ಲಿ ನಾವು ಅವರ ಜೊತೆ ಹೇಗೆ ಕ್ರಿಕೆಟ್ ಆಡಬೇಕು’ ಎಂದು ಎಚ್‌ಜೆಎಸ್ ರಾಷ್ಟ್ರೀಯ ವಕ್ತಾರ ರಮೇಶ್ ಶಿಂದೆ ಹೇಳಿದ್ದಾರೆ.