ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ: ಸಂಘರ್ಷ ಶಮನಕ್ಕೆ ಶಾ ಸಭೆ, ಮೃತರ ಕುಟುಂಬಗಳಿಗೆ ₹‌10 ಲಕ್ಷ ಪರಿಹಾರ ಘೋಷಣೆ

Published 30 ಮೇ 2023, 14:22 IST
Last Updated 30 ಮೇ 2023, 14:22 IST
ಅಕ್ಷರ ಗಾತ್ರ

ಇಂಫಾಲ್‌ (ಮಣಿಪುರ): ಬುಡಕಟ್ಟು ಸಮುದಾಯಗಳ ನಡುವಣ ಸಂಘರ್ಷದಿಂದ ನಲುಗಿರುವ ಮಣಿಪುರಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿವಿಧ ನಾಗರಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಂಗಳವಾರ ಸಮಾಲೋಚನೆ ನಡೆಸಿದರು.

ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಘೋಷಿಸಲಾಗಿದೆ. ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ನೇತೃತ್ವದಲ್ಲಿ ಸೋಮವಾರ ತಡರಾತ್ರಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಸಭೆ: ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶದ ಭಾಗವಾಗಿ ಸಚಿವ ಶಾ ಅವರು ವ್ಯಾಪಕ ಸಮಾಲೋಚನೆ, ಸಭೆಗಳನ್ನು ನಡೆಸಿದರು.

‘ಮಣಿಪುರದ ಮಹಿಳಾ ಸಂಘಟನೆ ‘ಮೀರಾ ಪೈಬಿ’ ನಾಯಕಿಯರೊಂದಿಗೆ ಸಭೆ ನಡೆಸಲಾಯಿತು. ರಾಜ್ಯದಲ್ಲಿ ಶಾಂತಿ ನೆಲೆಸಲು ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದು ಎಂಬುದನ್ನು ಸಭೆ ಪುನರುಚ್ಚರಿಸಿತು. ಈ ಗುರಿ ಸಾಧನೆಗೆ ಶ್ರಮಿಸಬೇಕು ಎಂಬ ದೃಢ ನಿಶ್ಚಯ ಮಾಡಲಾಯಿತು’ ಎಂದು ಸಭೆ ನಂತರ ಶಾ ಅವರು ಟ್ವೀಟ್‌ ಮಾಡಿದ್ದಾರೆ.

ಅವರು ಸೋಮವಾರದಿಂದ ನಾಲ್ಕು ದಿನಗಳ ಮಣಿಪುರ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿನ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಸಹಜ ಸ್ಥಿತಿ ಮರುಸ್ಥಾಪಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುವರು. ವಿವಿಧ ಸಮುದಾಯಗಳ ಮುಖಂಡರು, ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸುವರು ಎಂದು ಗೃಹ ಸಚಿವಾಲಯ ಮೂಲಗಳು ಹೇಳಿವೆ.

ಮಣಿಪುರದಲ್ಲಿ ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಒಂದು ತಿಂಗಳಿನಿಂದ ಸಂಘರ್ಷ ನಡೆಯುತ್ತಿದ್ದು, ಹಿಂಸಾಚಾರದಲ್ಲಿ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಭೇಟಿ: ಹೆಚ್ಚು ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಚುರ್ಚಾಂದಪುರ ಪಟ್ಟಣಕ್ಕೆ ಗೃಹ ಸಚಿವ ಶಾ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದರು.

ಕುಕಿ ಸಮುದಾಯದ ಬುದ್ಧಿಜೀವಿಗಳು ಮತ್ತು ವಿವಿಧ ಚರ್ಚ್‌ಗಳ ಮುಖಂಡರೊಂದಿಗೆ ಸಭೆ ನಡೆಸಿ, ಅವರ ಸಮಸ್ಯೆಗಳ ಕುರಿತು ಚರ್ಚಿಸಿದರು. ಗೃಹ ಕಾರ್ಯದರ್ಶಿ ಅಜಯಕುಮಾರ್‌ ಭಲ್ಲಾ, ಗುಪ್ತಚರ ಸಂಸ್ಥೆ ನಿರ್ದೇಶಕ ತಪನ್ ಕುಮಾರ್ ಡೇಕಾ ಉಪಸ್ಥಿತರಿದ್ದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಣಿಪುರದ ಚುರ್ಚಾಂದಪುರಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಕುಕಿ ಬುಡಕಟ್ಟು ಜನರು ರ‍್ಯಾಲಿ ನಡೆಸಿದರು –ಪಿಟಿಐ ಚಿತ್ರ
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಣಿಪುರದ ಚುರ್ಚಾಂದಪುರಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಕುಕಿ ಬುಡಕಟ್ಟು ಜನರು ರ‍್ಯಾಲಿ ನಡೆಸಿದರು –ಪಿಟಿಐ ಚಿತ್ರ

ಕಾಂಗ್ರೆಸ್‌ ನಿಯೋಗದಿಂದ ರಾಷ್ಟ್ರಪತಿ ಭೇಟಿ 

ನವದೆಹಲಿ (ಪಿಟಿಐ): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಿಯೋಗವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮಂಗಳವಾರ ಭೇಟಿ ಮಾಡಿ ಮಣಿಪುರ ವಿದ್ಯಮಾನ ಕುರಿತು ಚರ್ಚಿಸಿತು. ರಾಜ್ಯದಲ್ಲಿ ಶಾಂತಿ ನೆಲೆಸಿ ಜನಜೀವನ ಸಹಜ ಸ್ಥಿತಿಗೆ ಬರಲು ಕೂಡಲೇ ಮಧ್ಯಪ್ರವೇಶಿಸಬೇಕು. ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಆಯೋಗ ರಚಿಸಬೇಕು ಎಂದು ನಿಯೋಗವು ಮುರ್ಮು ಅವರಿಗೆ ಮನವಿ ಮಾಡಿತು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಪುರ ಮಾಜಿ ಮುಖ್ಯಮಂತ್ರಿ ಇಬೋಬಿ ಸಿಂಗ್ ‘ರಾಜ್ಯದಲ್ಲಿನ ಸಂಘರ್ಷದ ಬಗ್ಗೆ ಪ‍್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಯಾಕೆ ಮೌನವಾಗಿದ್ದಾರೆ’ ಎಂದು ಪ್ರಶ್ನಿಸಿದರು. ‘ಮೊದಲ ದಿನವೇ ಹಿಂಸಾಚಾರವನ್ನು ತಡೆಯಬಹುದಿತ್ತು. ಆದರೆ ಅದು ಮುಂದುವರಿಯಲು ಬಿಡಲಾಯಿತು. ಈ ಬೆಳವಣಿಗೆಗಳ ಹಿಂದೆ ಪಿತೂರಿ ಇದೆ ಎಂಬುದನ್ನು ಪ್ರಧಾನಿಯವರ ಮೌನವೇ ಹೇಳುತ್ತಿದೆ’ ಎಂದು ಆರೋಪಿಸಿದರು. ‘ಮಣಿಪುರದಲ್ಲಿ ಶಾಂತಿ ಸೌಹಾರ್ದ ನೆಲೆಸುವಂತೆ ಮಾಡಲು ಕೈಗೊಳ್ಳುವ ಕ್ರಮಗಳಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತದೆ. ತುರ್ತು ಕ್ರಮದಿಂದ ಮಾತ್ರ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ಸಾಧ್ಯ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಮಣಿಪುರ ಮಾಜಿ ಉಪಮುಖ್ಯಮಂತ್ರಿ ಗೈಖಂಗಮ್ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೀಶಮ್ ಮೇಘಚಂದ್ರ ಸಿಂಗ್ ಮುಖಂಡರಾದ ಮುಕುಲ್‌ ವಾಸ್ನಿಕ್ ಎಐಸಿಸಿಯ ಮಣಿಪುರ ಉಸ್ತುವಾರಿ ಭಕ್ತಚರಣ ದಾಸ ನಿಯೋಗದಲ್ಲಿದ್ದರು.

ಬಿಕ್ಕಟ್ಟು ಬಗೆಹರಿಯಲು ಸಮಯ ಬೇಕು: ಸಿಡಿಎಸ್‌ ಚೌಹಾಣ್

ಪುಣೆ (ಪಿಟಿಐ): ಮಣಿಪುರದಲ್ಲಿ ಸದ್ಯ ಉದ್ಭವಿಸಿರುವ ಬಿಕ್ಕಟ್ಟಿಗೂ ದಂಗೆಗೂ ಸಂಬಂಧವಿಲ್ಲ. ರಾಜ್ಯದ ಬಿಕ್ಕಟ್ಟು ಶಮನವಾಗಿ ಸಹಜಸ್ಥಿತಿ ಮರಳಲು ಸಾಕಷ್ಟು ಸಮಯ ಬೇಕು ಎಂದು ಮೂರೂ ಸೇನೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್ ಅನಿಲ್‌ ಚೌಹಾಣ್‌ ಮಂಗಳವಾರ ಹೇಳಿದರು. ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ್ದ ನಿರ್ಗಮನ ಪಥಸಂಚಲನದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಎರಡು ಸಮುದಾಯಗಳ ನಡುವಣ ಸಂಘರ್ಷವೇ ಈ ಸ್ಥಿತಿಗೆ ಕಾರಣ. ಈಶಾನ್ಯದಲ್ಲಿ ಈ ಹಿಂದೆ ಕಂಡುಬಂದಿದ್ದ ಬಂಡಾಯಕ್ಕೂ ಇದಕ್ಕೂ ಸಂಬಂಧವಿಲ್ಲ. ಸಂಘರ್ಷ ನಿಯಂತ್ರಿಸುವಲ್ಲಿ ಅಸ್ಸಾಂ ರೈಫಲ್ಸ್‌ ಹಾಗೂ ಸಶಸ್ತ್ರ ಸೇನಾ ಪಡೆಗಳು ಅದ್ಭುತ ಕಾರ್ಯ ಮಾಡಿವೆ’ ಎಂದರು.

ಸಿಆರ್‌ಪಿಎಫ್‌ ಐಜಿ ರಾಜೀವ್‌ಸಿಂಗ್‌ಗೆ ಹೊಣೆ?

ನವದೆಹಲಿ (ಪಿಟಿಐ): ಮಣಿಪುರದಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆಯನ್ನು ಸಿಆರ್‌ಪಿಎಫ್‌ನ ಪೊಲೀಸ್‌ ಮಹಾ ನಿರ್ದೇಶಕ ರಾಜೀವ್‌ ಸಿಂಗ್‌ ಅವರಿಗೆ ವಹಿಸುವ ಸಾಧ್ಯತೆ ಇದೆ. 1993ರ ಬ್ಯಾಚ್‌ನ ತ್ರಿಪುರಾ ಕೇಡರ್‌ ಐಪಿಎಸ್‌ ಅಧಿಕಾರಿಯಾಗಿರುವ ರಾಜೀವ್‌ ಅವರನ್ನು ಮೂರು ವರ್ಷಗಳ ಅವಧಿಗಾಗಿ ಮಣಿಪುರಕ್ಕೆ ನಿಯೋಜಿಸಲಾಗಿದೆ ಎಂದು ಗೃಹ ಸಚಿವಾಲಯ ಮೂಲಗಳು ಹೇಳಿವೆ.

ಪ್ರಮುಖಾಂಶಗಳು

* ಹಿಂಸಾಚಾರ ಪೀಡಿತ ಮಣಿಪುರ ತೊರೆದು ರಾಜ್ಯದಲ್ಲಿ ಆಶ್ರಯ ಪಡೆದವರಿಗೆ ಪರಿಹಾರ ಒದಗಿಸಲು ತಕ್ಷಣವೇ ₹ 5 ಕೋಟಿ ನೆರವು ನೀಡುವಂತೆ ಮಿಜೋರಾಂ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ

* ಹಿಂಸಾಚಾರ ಸಂತ್ರಸ್ತರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವ ಸಲುವಾಗಿ ಮಣಿಪುರಕ್ಕೆ ಭೇಟಿ ನೀಡಲು ಅನುಮತಿ ನೀಡುವಂತೆ ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ

* ಪೆಟ್ರೋಲ್‌ ಅಡುಗೆ ಅನಿಲ ಅಕ್ಕಿ ಮತ್ತು ಇತರ ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ನಿರ್ಧಾರ

ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ 2001ರಲ್ಲಿ ಮಣಿಪುರದಲ್ಲಿ ಹಿಂಸಾಚಾರ ನಡೆದಿತ್ತು. 22 ವರ್ಷಗಳ ನಂತರ ಮರುಕಳಿಸಿದೆ. ಬಿಜೆಪಿಯ ಒಡೆದು ಆಳುವ ರಾಜಕಾರಣವೇ ಈ ಸ್ಥಿತಿಗೆ ಕಾರಣ.
–ಜೈರಾಮ್‌ ರಮೇಶ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT