ನವದೆಹಲಿ: ಉದ್ಯೋಗಿಯನ್ನು ವಜಾಗೊಳಿಸಿದ ಆದೇಶವನ್ನು ರದ್ದು ಮಾಡಿದ ಮೇಲೆ ಆತ/ಆಕೆ ಸೇವೆಯಲ್ಲಿಯೇ ಮುಂದುವರಿದಿರುವುದಾಗಿ ಭಾವಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಾಂಗ ಇಲಾಖೆಯ ಮಹಿಳಾ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದಡಿ ಸೇವೆಯಿಂದ ವಜಾಗೊಂಡಿದ್ದ ಸಿವಿಲ್ ನ್ಯಾಯಾಧೀಶರೊಬ್ಬರಿಗೆ ಪೂರ್ಣ ವೇತನ ಪಾವತಿ ಮಾಡುವಂತೆ ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ ನಾಥ್ ಹಾಗೂ ಪಿ.ಬಿ.ವರಾಳೆ ಅವರಿದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.
ಅರ್ಜಿದಾರ ಅನಂತದೀಪ ಸಿಂಗ್ ಅವರು, 2022ರ ಏಪ್ರಿಲ್ 20ರಿಂದ 2024ರ ಏಪ್ರಿಲ್ 2ರ ವರೆಗಿನ ಅವಧಿಗೆ ಪೂರ್ತಿ ವೇತನ ಪಡೆಯಲು ಅರ್ಹರು. ಅಲ್ಲದೆ, 2009ರಿಂದ 2022ರ ವರೆಗಿನ ಅವಧಿಯ ವೇತನದ ಶೇ 50ರಷ್ಟು ಮೊತ್ತವನ್ನು ಅವರಿಗೆ ಪಾವತಿ ಮಾಡುವಂತೆ ಪೀಠವು ಸೆ.6ರಂದು ಹೊರಡಿಸಿರುವ ಆದೇಶದಲ್ಲಿ ನಿರ್ದೇಶನ ನೀಡಿದೆ.
ಪ್ರಕರಣ: ಅನಂತದೀಪ ಸಿಂಗ್ ಅವರು ಪಂಜಾಬ್ ನ್ಯಾಯಾಂಗ ಇಲಾಖೆಯಲ್ಲಿ 2006ರಲ್ಲಿ ನೇಮಕಗೊಂಡಿದ್ದರು. ಅವರ ವಿರುದ್ಧ ಕೇಳಿ ಬಂದ ಆರೋಪಗಳ ಹಿನ್ನೆಲೆಯಲ್ಲಿ, ಮೂರು ವರ್ಷಗಳ ಪ್ರೊಬೇಷನರಿ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರನ್ನು 2009ರಲ್ಲಿ ಸೇವೆಯಿಂದ ವಜಾ ಮಾಡಲಾಗಿತ್ತು.
ಇದನ್ನು ಪ್ರಶ್ನಿಸಿ ಅನಂತದೀಪ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅನಂತದೀಪ ಸಿಂಗ್ ಅವರನ್ನು ನೌಕರಿಯಿಂದ ವಜಾಗೊಳಿಸಿ 2009ರಲ್ಲಿ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿ, 2022ರ ಏಪ್ರಿಲ್ 20ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಲ್ಲದೇ, ಅವರನ್ನು ಪುನಃ ಸೇವೆಯಲ್ಲಿ ಮುಂದುವರಿಸುವಂತೆಯೂ ನಿರ್ದೇಶನ ನೀಡಿತ್ತು.
ಈ ಕುರಿತು ಪಂಜಾಬ್ ಸರ್ಕಾರ ಅಥವಾ ನ್ಯಾಯಾಂಗ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಅನಂತದೀಪ ಸಿಂಗ್ ಅವರು ಪುನಃ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
‘ತನ್ನನ್ನು ನೌಕರಿಯಿಂದ ವಜಾಗೊಳಿಸಿದ್ದ ಆದೇಶ ಪ್ರಶ್ನಿಸಿ ಅರ್ಜಿದಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದು ಮಾಡಲಾಗಿದೆ. ಸಹಜವಾಗಿಯೇ ಅರ್ಜಿದಾರರನ್ನು ನೌಕರಿಯಲ್ಲಿ ಮುಂದುವರಿಸಬೇಕಿತ್ತು’ ಎಂದು ಸೆ.6ರಂದು ಹೊರಡಿಸಿರುವ ಆದೇಶದಲ್ಲಿ ಪೀಠವು ಹೇಳಿದೆ.
‘ಈ ಸಂಬಂಧ ಆದೇಶ ಹೊರಡಿಸಿದ ನಂತವೂ, ಅರ್ಜಿದಾರರನ್ನು ಪುನಃ ನೌಕರಿಯಲ್ಲಿ ಮುಂದುವರಿಸುವುದು ಹಾಗೂ ಅವರನ್ನು ಸೇವೆಯಿಂದ ವಜಾಗೊಳಿಸಿದ ದಿನದಿಂದ ಬಾಕಿ ವೇತನ ನೀಡುವ ಕುರಿತು ಹೈಕೋರ್ಟ್ ಅಥವಾ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಪೀಠವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.