ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಗೆ ಮೈತ್ರಿಕೂಟ ರಚಿಸಲು ಸೇತುವೆಯಾಗಿರುವೆ: ನಿತೀಶ್

ಶರದ್‌ ಪವಾರ್, ಉದ್ಧವ್‌ ಠಾಕ್ರೆ ಭೇಟಿ | ಬಿಜೆಪಿ ವಿರುದ್ಧ ವಿಪಕ್ಷಗಳ ಒಗ್ಗಟ್ಟಿಗೆ ಮುಂದುವರಿದ ಕಸರತ್ತು
Published 11 ಮೇ 2023, 14:05 IST
Last Updated 11 ಮೇ 2023, 14:05 IST
ಅಕ್ಷರ ಗಾತ್ರ

ಮುಂಬೈ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟ ರಚಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಹಾಗೂ  ಶಿವಸೇನಾ (ಉದ್ಧವ್ ಬಾಳಾಸಾಹೇಬ ಠಾಕ್ರೆ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಗುರುವಾರ ಇಲ್ಲಿ ಪ್ರತ್ಯೇಕವಾಗಿ ಭೇಟಿ ಮಾಡಿ, ಚರ್ಚಿಸಿದರು.

ಈ ಭೇಟಿ ಸಂದರ್ಭದಲ್ಲಿ, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಇದ್ದರು.

ದಕ್ಷಿಣ ಮುಂಬೈನಲ್ಲಿರುವ ನಿವಾಸದಲ್ಲಿ ಶರದ್‌ ಪವಾರ್‌ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್‌ಕುಮಾರ್, ‘ನಿಮ್ಮ ಪಕ್ಷಕ್ಕಾಗಿ ಮಾತ್ರವಲ್ಲ, ದೇಶದ ಹಿತರಕ್ಷಣೆಗಾಗಿಯೂ ನೀವು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಬೇಕು ಎಂಬುದಾಗಿ ಶರದ್‌ ಪವಾರ್‌ಗೆ ಹೇಳಿರುವೆ’ ಎಂದರು.

‘ಬಿಜೆಪಿ ವಿರುದ್ಧದ ಹೋರಾಟಕ್ಕೆ ಹೆಚ್ಚು ಸಂಖ್ಯೆಯಲ್ಲಿ ವಿರೋಧ ಪಕ್ಷಗಳು ಕೈಜೋಡಿಸಿದಷ್ಟೂ ದೇಶಕ್ಕೆ ಒಳ್ಳೆಯದು. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ವೇಳೆಗೆ ವಿಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನಗಳಿಗೆ ಸೇತುವೆಯಾಗಿ ನಾನು ಇಲ್ಲಿಗೆ ಬಂದಿರುವೆ’ ಎಂದರು.

‘ಶರದ್‌ ಪವಾರ್ ಅವರು ವಿಪಕ್ಷಗಳ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲು ಒಪ್ಪಿದಲ್ಲಿ ಅದಕ್ಕಿಂತ ಹೆಚ್ಚಿನ ಸಂತೋಷಕರ ಸಂಗತಿ ಬೇರೇನೂ ಇರಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ನಿತೀಶ್‌ ಉತ್ತರಿಸಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಶರದ್‌ ಪವಾರ್‌, ‘ಪ್ರಜಾಪ್ರಭುತ್ವದ ಉಳಿವಿಗಾಗಿ ವಿರೋಧ ಪಕ್ಷಗಳು ಒಗ್ಗೂಡಿ ಕೆಲಸ ಮಾಡುವುದು ಅಗತ್ಯ. ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ನಂತರ ನಿರ್ಧರಿಸಲಾಗುತ್ತದೆ’ ಎಂದು ಹೇಳಿದರು.

‘ದೇಶದ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ, ನಾವು ಒಗ್ಗೂಡಿ ಕೆಲಸ ಮಾಡಿದಷ್ಟೂ ನಾವು ರಚಿಸಲಿರುವ ಪರ್ಯಾಯ ರಂಗಕ್ಕೆ ಹೆಚ್ಚು ಬೆಂಬಲ ಸಿಗಲಿದೆ ಅನಿಸುತ್ತಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ, ಪವಾರ್‌ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರು ನಿತೀಶ್‌ ಕುಮಾರ್‌ ಹಾಗೂ ತೇಜಸ್ವಿ ಯಾದವ್‌ ಅವರನ್ನು ಹೂಗುಚ್ಛ ನೀಡಿ, ಸ್ವಾಗತಿಸಿದರು.

ಠಾಕ್ರೆ ಭೇಟಿ: ಪವಾರ್‌ ಭೇಟಿಗೂ ಮುನ್ನ ನಿತೀಶ್‌ ಕುಮಾರ್ ಹಾಗೂ ತೇಜಸ್ವಿ ಯಾದವ್, ‘ಮಾತೋಶ್ರೀ’ಯಲ್ಲಿ ಉದ್ಧವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದರು.

‘ಮುಂದಿನ ಸಭೆ ಯಾವಾಗ ನಡೆಯುತ್ತದೆ ಎಂಬುದನ್ನು ವಿರೋಧ ಪಕ್ಷಗಳು ನಿರ್ಧರಿಸಲಿವೆ’ ಎಂದು ಪ್ರಶ್ನೆಯೊಂದಕ್ಕೆ ನಿತೀಶ್‌ ಉತ್ತರಿಸಿದರು. ಠಾಕ್ರೆ ಪುತ್ರ ಆದಿತ್ಯ, ರಾಜ್ಯಸಭಾ ಸದಸ್ಯ ಸಂಜಯ್ ರಾವುತ್‌ ಇದ್ದರು.

ಭೇಟಿ–ಮಾತುಕತೆ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವ ನಿತೀಶ್‌ಕುಮಾರ್‌, ಈಗಾಗಲೇ ಕೆಲ ವಿಪಕ್ಷಗಳ ನಾಯಕರನ್ನು ಭೇಟಿ ಮಾಡಿದ್ದಾರೆ.

ಭುವನೇಶ್ವರದಲ್ಲಿ ಮಂಗಳವಾರ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಅವರನ್ನು ಭೇಟಿ ಮಾಡಿ, ಚರ್ಚಿಸಿದ್ದರು.

ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಮುಂಬೈನಲ್ಲಿ ಗುರುವಾರ ಭೇಟಿ ಮಾಡಿದರು –ಪಿಟಿಐ ಚಿತ್ರ
ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಮುಂಬೈನಲ್ಲಿ ಗುರುವಾರ ಭೇಟಿ ಮಾಡಿದರು –ಪಿಟಿಐ ಚಿತ್ರ
ದೇಶದಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನಗಳು ನಡೆಯುತ್ತಿವೆ. ಇಂಥ ಕೆಲಸಕ್ಕೆ ನಾವು ಅವಕಾಶ ನೀಡಬಾರದು
ಉದ್ಧವ್‌ ಠಾಕ್ರೆ ಶಿವಸೇನಾ (ಯುಬಿಟಿ) ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT