ಕೋಲ್ಕತ್ತ: ವಾಯುಭಾರ ಕುಸಿತದ ಪರಿಣಾಮ ದಿಢೀರನೆ ಸುರಿದ ಭಾರಿ ಮಳೆಯಿಂದಾಗಿ ಕೋಲ್ಕತ್ತ ಹಾಗೂ ಸುತ್ತಲಿನ ಜಿಲ್ಲೆಗಳ ಹಲವು ಪ್ರದೇಶಗಳು ಶನಿವಾರ ಜಲಾವೃತಗೊಂಡಿವೆ.
ಇದರಿಂದಾಗಿ ಕೋಲ್ಕತ್ತದ ವಿಮಾನ ನಿಲ್ದಾಣ, ಹೌರಾ ನಗರದ ಅಕ್ಕಪಕ್ಕದ ಪ್ರದೇಶಗಳು, ಸಾಲ್ಟ್ ಲೇಕ್ ಮತ್ತು ಬಾರಕ್‌ಪೋರ್ ಪ್ರದೇಶಗಳಲ್ಲಿ ನೀರು ನುಗ್ಗಿದೆ. ದಿನವಿಡೀ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನೀರು ನಿಂತಿದೆ. ಆದರೆ ವಿಮಾನಗಳ ಹಾರಾಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೋಲ್ಕತ್ತದ ಕೇಂದ್ರ ಹಾಗೂ ದಕ್ಷಿಣ ಭಾಗದ ಹಲವೆಡೆ ರಸ್ತೆ ಮೇಲೆ ನೀರು ನಿಂತಿದೆ. ಆದರೆ ವಾಹನ ಸಂಚಾರಕ್ಕೆ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Apron area of the Kolkata Netaji Subhash Chandra Bose International Airport (CCU), India has been flooded after heavy rain in the City.
— FL360aero (@fl360aero) August 3, 2024
🎥Soumya Ghosh for @fl360aero#airport #flood #infrastructure pic.twitter.com/6Igi772BeI
‘ನಗರದಲ್ಲಿ ಒಟ್ಟು 7 ಸೆಂ.ಮೀ. ಮಳೆಯಾಗಿದೆ. ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿದಿದೆ. ಇದು ಬಿಹಾರ ಹಾಗೂ ಉತ್ತರ ಪ್ರದೇಶ ಕಡೆ ನಿಧಾನವಾಗಿ ಸಾಗುತ್ತಿದೆ. ಇದರಿಂದಾಗಿ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ ಮುಂಗಾರು ಬಿರುಸುಗೊಂಡಿದೆ. ಇದರಿಂದಾಗಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ’ ಎಂದಿದ್ದಾರೆ.
ಹೌರಾ, ಪಶ್ಚಿಮ ಬರ್ಧಮಾನ್, ವೀರಭೂಮಿ, ಪೂರ್ಬ ವರ್ಧಮಾನ್, ಹೂಗ್ಲಿ, ನಾಡಿಯಾ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಮುಂದಿನ 12 ಗಂಟೆಗಳ ಕಾಲ ಮಳೆಯಾಗಲಿದೆ. ಈ ಭಾಗಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಡಾರ್ಜಲಿಂಗ್, ಕೂಚ್‌ಬಿಹಾರ್, ಮಾಲ್ದಾ, ಮುಷಿರಾಬಾದ್, ಪುರುಲಿಯಾ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲಿಪುರ್ದೌರ್ ಜಿಲ್ಲೆಯಲ್ಲಿ 20 ಸೆಂ.ಮೀ.ಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೊಷಿಸಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕೋಲ್ಕತ್ತದಲ್ಲಿ ಗರಿಷ್ಠ ತಾಪಮಾನ 30.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 2.4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 0.6 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.