ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್‌ ರಾಕೆಟ್‌ ಉಡಾವಣೆ

Published 24 ಆಗಸ್ಟ್ 2024, 6:07 IST
Last Updated 24 ಆಗಸ್ಟ್ 2024, 6:07 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ನವೋದ್ಯಮ ಕಂಪನಿ ‘ಸ್ಪೇಸ್‌ ಝೋನ್‌ ಇಂಡಿಯಾ’, ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್‌ ರಾಕೆಟ್‌ ಅನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಕುರಿತ ಅಧ್ಯಯನದ ಉದ್ದೇಶದಿಂದ ‘ರುಮಿ–2024’ ಹೆಸರಿನ ರಾಕೆಟ್‌ ಅಭಿವೃದ್ಧಿಪಡಿಸಲಾಗಿದೆ. ಸ್ಪೇಸ್‌ ಝೋನ್‌ ಇಂಡಿಯಾ ಕಂಪನಿಯು ಕಳೆದ ಎರಡು ವರ್ಷಗಳಿಂದ ‘ಮಿಷನ್‌ ರುಮಿ’ ಹೆಸರಿನಲ್ಲಿ ಹಲವು ಸಂಶೋಧನೆಗಳನ್ನು ನಡೆಸುತ್ತಾ ಬಂದಿದೆ.

ಚೆನ್ನೈ ಸಮೀಪದ ತಿರುವಿಡಂದಾಯ್‌ನಲ್ಲಿ ಮೊಬೈಲ್‌ ಲಾಂಚರ್‌ ಬಳಸಿ ರಾಕೆಟ್‌ನ ಉಡಾವಣೆ ನಡೆದಿದೆ. ಹೈಬ್ರಿಡ್‌ ರಾಕೆಟ್‌ವೊಂದನ್ನು ಮೊಬೈಲ್ ಲಾಂಚರ್‌ ಬಳಸಿ ಉಡಾವಣೆ ನಡೆಸಿದ್ದು ವಿಶ್ವದಲ್ಲಿ ಇದೇ ಮೊದಲು ಎಂದು ಕಂಪನಿ ಹೇಳಿದೆ.

ಶನಿವಾರ ಉಡಾವಣೆಯಾದ ರಾಕೆಟ್‌, ಮೂರು ಕ್ಯೂಬ್‌ ಉಪಗ್ರಹಗಳು ಮತ್ತು 50 ಸಣ್ಣ ಉಪಗ್ರಹಗಳನ್ನು ಹೊತ್ತೊಯ್ದಿದೆ. ಈ ಉಪಗ್ರಹಗಳು ಕಾಸ್ಮಿಕ್‌ ಕಿರಣಗಳ ತೀವ್ರತೆ, ನೇರಳಾತೀತ ಕಿರಣಗಳು, ಗಾಳಿಯ ಗುಣಮಟ್ಟ ಸೇರಿದಂತೆ ವಾತಾವರಣದ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಲಿವೆ.

‘3.5 ಮೀ. ಎತ್ತರದ ರಾಕೆಟ್‌ ಅನ್ನು ಬೆಳಿಗ್ಗೆ 7.25ಕ್ಕೆ ಉಡಾವಣೆ ಮಾಡಲಾಯಿತು. ಬೆಳಿಗ್ಗೆ 7ಕ್ಕೆ ಉಡಾವಣೆಯಾಗಬೇಕಿದ್ದ ರಾಕೆಟ್‌ನ ಉಡಾವಣೆ ತಾಂತ್ರಿಕ ಕಾರಣಗಳಿಂದ ಅಲ್ಪ ತಡವಾಯಿತು’ ಎಂದು ಸ್ಪೇಸ್‌ ಝೋನ್‌ ಇಂಡಿಯಾದ ಸ್ಥಾಪಕ ಸಿಇಒ ಆನಂದ್‌ ಮೇಗಲಿಂಗಂ ಹೇಳಿದರು. ತಮ್ಮ ಮಗ ರುಮಿತ್ರನ್‌ ಅವರ ಹೆಸರನ್ನೇ ರಾಕೆಟ್‌ಗೆ (ರುಮಿ) ಇಡಲಾಗಿದೆ ಎಂದು ಅವರು ತಿಳಿಸಿದರು.

‘ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ಅನ್ನು ಪರಿಚಯಿಸುವ ಮೂಲಕ, ನಾವು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಜತೆಯಲ್ಲೇ ಪರಿಸರದ ಮೇಲಾಗುವ ಪರಿಣಾಮವನ್ನೂ ಕಡಿಮೆ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT