ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಈ ಬಾರಿ ವಾಡಿಕೆಗಿಂತಲೂ ಕಡಿಮೆ ಮಳೆ ಸಾಧ್ಯತೆ

ಸ್ಕೈಮೆಟ್‌ ಹವಾಮಾನ ಸಂಸ್ಥೆ ಹೇಳಿಕೆ
Last Updated 10 ಏಪ್ರಿಲ್ 2023, 16:10 IST
ಅಕ್ಷರ ಗಾತ್ರ

ನವದೆಹಲಿ: ‘ಈ ವರ್ಷದ ಮುಂಗಾರು ಹಂಗಾಮಿನಲ್ಲಿ ದೇಶದೆಲ್ಲೆಡೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗಲಿದೆ. ಲಾ ನಿನಾ (ಸಾಗರ ಮತ್ತು ವಾತಾವರಣದ ವಿದ್ಯಮಾನ) ಪರಿಸ್ಥಿತಿ ಕೊನೆಗೊಂಡಿರುವುದರಿಂದ ಬರಗಾಲ ಆವರಿಸುವ ಸಾಧ್ಯತೆ ಶೇ 20ರಷ್ಟಿದೆ’ ಎಂದು ಖಾಸಗಿ ಹವಾಮಾನ ಸಂಸ್ಥೆಯಾಗಿರುವ ಸ್ಕೈಮೆಟ್‌ ಸೋಮವಾರ ಹೇಳಿದೆ.

ಸತತ ನಾಲ್ಕು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಷ್ಟು ಹಾಗೂ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿದೆ. ಆದರೆ ಸ್ಕೈಮೆಟ್‌ ಸಂಸ್ಥೆ ಬಿಡುಗಡೆಗೊಳಿಸಿರುವ ಸದ್ಯದ ವರದಿಯು ಮುಂಗಾರು ಮಳೆಯನ್ನೇ ಅವಲಂಬಿಸಿರುವ ಕೃಷಿಕರನ್ನು ಆತಂಕಕ್ಕೆ ದೂಡಿದೆ.

ಮುಂಗಾರು ಕ್ಷೀಣಿಸಿದರೆ ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತಗೊಳ್ಳಲಿದ್ದು, ಇದು ಹಣದುಬ್ಬರ ಹೆಚ್ಚಳಕ್ಕೆ ದಾರಿ ಮಾಡಿಕೊಡಬಹುದು. ಇದರಿಂದ ಆರ್ಥಿಕ ಬೆಳವಣಿಗೆಗೆ ದೊಡ್ಡ ಪೆಟ್ಟು ಬೀಳಬಹುದು.

‘ಈ ಬಾರಿಯ ಮಳೆಯ ದೀರ್ಘಾವಧಿ ಸರಾಸರಿಯು (ಎಲ್‌ಪಿಎ) ಸುಮಾರು ಶೇ 94ರಷ್ಟು ಇರಲಿದ್ದು, ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ 868.6 ಮಿಲಿ ಮೀಟರ್‌ ಮಳೆ ಸುರಿಯುವ ನಿರೀಕ್ಷೆ ಇದೆ’ ಎಂದು ಸ್ಕೈಮೆಟ್‌ ತಿಳಿಸಿದೆ.

‘ದೇಶದ ಉತ್ತರ ಹಾಗೂ ಮಧ್ಯ ಭಾಗದ ರಾಜ್ಯಗಳಲ್ಲಿ ಮಳೆ ಕೊರತೆಯಾಗುವ ಸಾಧ್ಯತೆ ಇದೆ. ಜುಲೈ ಹಾಗೂ ಆಗಸ್ಟ್‌ನಲ್ಲಿ ಗುಜರಾತ್‌, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅಸಮರ್ಪಕ ಮಳೆ ಸುರಿಯುವ ನಿರೀಕ್ಷೆ ಇದೆ. ಉತ್ತರ ಭಾರತದ ಕೃಷಿ ಕಣಜಗಳೆನಿಸಿರುವ ಪಂಜಾಬ್‌, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಮಳೆಗಾಲದ ಎರಡನೇ ಅವಧಿಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಸಂಭವವಿದೆ’ ಎಂದು ಮಾಹಿತಿ ನೀಡಿದೆ.

‘ಈ ಬಾರಿ ಅಧಿಕ ಮಳೆಯಾಗುವ ಸಾಧ್ಯತೆಯೇ ಇಲ್ಲ. ವಾಡಿಕೆಗಿಂತಲೂ ತುಸು ಹೆಚ್ಚು ಮಳೆ ಸುರಿಯುವ ಸಂಭವ ಶೇ 15ರಷ್ಟಿದೆ. ಸಾಧಾರಣ ಮಳೆಯಾಗುವ ಸಾಧ್ಯತೆ ಶೇ 25 ಹಾಗೂ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಸಾಧ್ಯತೆ ಶೇ 40ರಷ್ಟಿದೆ’ ಎಂದು ಸ್ಕೈಮೆಟ್‌ ಪ್ರಕಟಣೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಈ ಕುರಿತ ವರದಿಯನ್ನು ಇನ್ನೂ ಬಿಡುಗಡೆಗೊಳಿಸಿಲ್ಲ. ಆದರೆ ಏಪ್ರಿಲ್‌ನಿಂದ ಜೂನ್‌ವರೆಗೂ ದೇಶದ ಹಲವೆಡೆ ಬಿಸಿಗಾಳಿ ಬೀಸಬಹುದು ಎಂದು ತಿಳಿಸಿದೆ.

‘ಎಲ್‌ ನಿನೊ ವಿದ್ಯಮಾನವು ಮರುಕಳಿಸುವುದರಿಂದ ಈ ಬಾರಿ ಮುಂಗಾರು ಕ್ಷೀಣಿಸಬಹುದು ಎಂದು ಊಹಿಸಲಾಗಿದೆ’ ಎಂದು ಸ್ಕೈಮೆಟ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜತಿನ್‌ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT