ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ –ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಚರ್ಚೆ: ಬಾಂಧವ್ಯ ವೃದ್ಧಿಗೆ ಯೋಜನೆ

ಪ್ರಧಾನಿ ಮೋದಿ –ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಮಾತುಕತೆ * ಐದು ಒಪ್ಪಂದಗಳಿಗೆ ಸಹಿ
Published 21 ಜುಲೈ 2023, 16:12 IST
Last Updated 21 ಜುಲೈ 2023, 16:12 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ –ಶ್ರೀಲಂಕಾ ನಡುವೆ ಸಂಪರ್ಕ ವ್ಯವಸ್ಥೆ, ಆರ್ಥಿಕ ಬಾಂಧವ್ಯವನ್ನು ಗಣನೀಯವಾಗಿ ವೃದ್ಧಿಸಲು ಒತ್ತುನೀಡುವ ದೂರದರ್ಶಿ ಯೋಜನೆಯನ್ನು ಉಭಯ ರಾಷ್ಟ್ರಗಳು ಶುಕ್ರವಾರ ಅಂಗೀಕರಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಈ ಸಂಬಂಧ ವಿಸ್ತೃತ ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ಮೋದಿ ಅವರು, ದ್ವೀಪ ರಾಷ್ಟ್ರದಲ್ಲಿ ತಮಿಳು ಸಮುದಾಯದವರಿಗೆ ಘನತೆ ಹಾಗೂ ಗೌರವದಿಂದ ಬದುಕು ಸಾಗಿಸುವ ವಾತಾವರಣವನ್ನು ಕಲ್ಪಿಸಬೇಕು ಎಂದು ಶ್ರೀಲಂಕಾದ ಅಧ್ಯಕ್ಷರಿಗೆ ಮನವರಿಕೆ ಮಾಡಿದರು.

ಉಭಯ ನಾಯಕರು ಐದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದರಲ್ಲಿ ಶ್ರೀಲಂಕಾದಲ್ಲಿ ಯುಪಿಐ ಅಪ್ಲಿಕೇಷನ್‌ಗೆ ಮಾನ್ಯತೆಗೆ ಸಂಬಂಧಿಸಿದಂತೆ ಶ್ರೀಲಂಕಾ ಮತ್ತು ಎನ್‌ಪಿಸಿಐ ಇಂಟರ್‌ನ್ಯಾಷನಲ್‌ ಪೇಮೆಂಟ್‌ ಲಿಮಿಟೆಡ್ (ಎನ್ಐಪಿಎಲ್‌) ಒಪ್ಪಂದ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಹಕಾರ ಒಪ್ಪಂದಗಳು ಸೇರಿವೆ.

ಈ ಕುರಿತ ಹೇಳಿಕೆಯಲ್ಲಿ ಮೋದಿ ಅವರು, ಉಭಯ ರಾಷ್ಟ್ರಗಳ ಅಭಿವೃದ್ಧಿ ಹಾಗೂ ರಕ್ಷಣೆಯು ಪರಸ್ಪರ ಬೆಸೆದುಕೊಂಡಿವೆ. ರಾಷ್ಟ್ರಗಳ ಭದ್ರತೆ ಹಾಗೂ ಸೂಕ್ಷ್ಮತೆಯನ್ನು ಅರಿತುಕೊಂಡು ಪರಸ್ಪರರು  ಕಾರ್ಯನಿರ್ವಹಿಸುವುದು ಉತ್ತಮ ಎಂದು ‌ಪ್ರತಿಪಾದಿಸಿದ್ದಾರೆ.

ಶ್ರೀಲಂಕಾದಲ್ಲಿ ಚೀನಾ ತನ್ನ ಪ್ರಭಾವ, ಪ್ರಾಬಲ್ಯ ವಿಸ್ತರಿಸಲು ಯತ್ನಿಸುತ್ತಿದೆ ಎಂಬ ಭಾರತದ ಕಳವಳದ ಹಿನ್ನೆಲೆಯಲ್ಲಿ ಮೋದಿ ಈ ಮಾತು ಹೇಳಿದರು. ಚರ್ಚೆಯಲ್ಲಿ ಮೀನುಗಾರರ ವಿಷಯವು ಚರ್ಚೆಯಾಗಿದ್ದು, ಮಾನವೀಯ ಆಧಾರದಲ್ಲಿ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು ಎಂದು ತಿಳಿಸಿದರು.

ಪ್ರಯಾಣಿಕರ ಸೇವೆ: ತಮಿಳುನಾಡಿನ ನಾಗರಪಟ್ಟಿಣಂ ಮತ್ತು ಶ್ರೀಲಂಕಾದ ಕಂಕೆಸಂತುರೈ ನಡುವೆ ಜಲಮಾರ್ಗದಲ್ಲಿ ಪ್ರಯಾಣಿಕರ ಸೇವೆ ಆರಂಭಿಸಲು ಉಭಯ ಮುಖಂಡರು ನಿರ್ಧರಿಸಿದರು. ಅಲ್ಲದೆ, ದ್ವೀಪರಾಷ್ಟ್ರದಲ್ಲಿ ತಮಿಳು ಪ್ರಜೆಗಳಿಗಾಗಿ ₹ 75 ಕೋಟಿ ಮೌಲ್ಯದ ವಿವಿಧ ಯೋಜನೆಗಳ ಜಾರಿಗೆ ನಿರ್ಧರಿಸಲಾಯಿತು ಎಂದು ಮೋದಿ ಹೇಳಿದರು.

ಶ್ರೀಲಂಕಾದ ಆರ್ಥಿಕ ಸಂಕಷ್ಟವನ್ನು ಉಲ್ಲೇಖಿಸಿದ ಮೋದಿ, ಭಾರತೀಯರು ದ್ವೀಪರಾಷ್ಟ್ರದ ಜನರ ಜೊತೆಗಿದ್ದಾರೆ. ಸ್ಥಿರ ಮತ್ತು ಅಭ್ಯುದಯ ಶ್ರೀಲಂಕಾದ ಸ್ಥಾಪನೆಯು ಭಾರತವಷ್ಟೇ ಅಲ್ಲ, ಹಿಂದೂ ಮಹಾಸಾಗರ ವಲಯದ ದೃಷ್ಟಿಯಿಂದಲೂ ಅಗತ್ಯ ಎಂದು ಪ್ರತಿಪಾದಿಸಿದರು.

13ನೇ ತಿದ್ದುಪಡಿಯ ಅನುಷ್ಠಾನ ಹಾಗೂ ಪ್ರಾಂತ್ಯ ಪರಿಷತ್‌ ಚುನಾವಣೆಗಳನ್ನು ನಡೆಸುವ ತನ್ನ ಬದ್ಧತೆಯನ್ನು ಶ್ರೀಲಂಕಾ ಉಳಿಸಿಕೊಳ್ಳಲಿದೆ ಹಾಗೂ ಈ ಮೂಲಕ ಅಲ್ಲಿರುವ ತಮಿಳು ಸಮುದಾಯದವರಿಗೆ ಘನತೆಯ ಬದುಕು ಕಲ್ಪಿಸಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ಅವರು, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಜಲಮಾರ್ಗದಲ್ಲಿ ಉಭಯ ದೇಶಗಳ ಸವಾಲುಗಳನ್ನು ಪ್ರಮುಖವಾಗಿ ಚರ್ಚಿಸಲಾಯಿತು ಎಂದು ತಿಳಿಸಿದರು.

Quote - ದೂರದರ್ಶಿ ಯೋಜನೆಯು ಭಾರತದ ದೀರ್ಘಕಾಲದ ಬದ್ಧತೆಯಾಗಿ. ಆರ್ಥಿಕ ಮತ್ತು ತಂತ್ರಜ್ಞಾನ ಸಹಕಾರ ಒಪ್ಪಂದ ಮಾತುಕತೆ ಶೀಘ್ರ ಆರಂಭವಾಗಲಿದೆ. ಇದು ವಾಣಿಜ್ಯ ಆರ್ಥಿಕ ಸಹಕಾರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆಯಲಿದೆ. ನರೇಂದ್ರ ಮೋದಿ ಪ್ರಧಾನಮಂತ್ರಿ

Quote - ಭಾರತದ ಪ್ರಗತಿಯಿಂದ ನೆರೆಹೊರೆ ರಾಷ್ಟ್ರಗಳು ಹಾಗೂ ಹಿಂದೂ ಮಹಾಸಾಗರ ವಲಯಕ್ಕೂ ಅನುಕೂಲ ಎಂಬುದು ನಮ್ಮ ಭಾವನೆ. ಶ್ರೀಲಂಕಾದ ಸವಾಲಿನ ಸಂದರ್ಭದಲ್ಲಿ ಭಾರತದ ಬೆಂಬಲ ಮತ್ತು ಒಗ್ಗಟ್ಟು ಶ್ಲಾಘನೀಯ ರಾನಿಲ್‌ ವಿಕ್ರಮಸಿಂಘೆ ಶ್ರೀಲಂಕಾ ಅಧ್ಯಕ್ಷ

- ಶ್ರೀಲಂಕಾ ಸರ್ಕಾರದಿಂದ ತಮಿಳರಿಗೆ ಘನತೆಯ ಬದುಕು –ಪ್ರಧಾನಿ ನಿರೀಕ್ಷೆ

‘ದ್ವೀಪರಾಷ್ಟ್ರದ ತಮಿಳು ಸಮುದಾಯದವರಿಗೆ ಘನತೆಯ ಬದುಕು ಕಲ್ಪಿಸಿ ಅವರ ನಿರೀಕ್ಷೆಗಳಿಗೆ ಶ್ರೀಲಂಕಾ ಸರ್ಕಾರ ಸ್ಪಂದಿಸಲಿದೆ ಎಂದು ಆಶಿಸುತ್ತೇವೆ’ ಎಂದು ಪ್ರಧಾನಿ ಮೋದಿ ಶ್ರೀಲಂಕಾದ ಅಧ್ಯಕ್ಷರಿಗೆ ಅವರಿಗೆ ತಿಳಿಸಿದರು. ಶುಕ್ರವಾರ ಮಾತುಕತೆಯ ವೇಳೆ ತಮಿಳು ಸಮುದಾಯದವರ ಪರಿಸ್ಥಿತಿ ಪ್ರಮುಖವಾಗಿ ಚರ್ಚೆಯಾಯಿತು. ಇದೇ ಸಂದರ್ಭದಲ್ಲಿ ಮೋದಿ ಅವರು ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯ ಅನುಷ್ಠಾನದ ಅಗತ್ಯವನ್ನು ಪ್ರತಿಪಾದಿಸಿದರು.  ಸಂವಿಧಾನದ 13ನೇ ತಿದ್ದುಪಡಿಯು ಅಧಿಕಾರ ವಿಕೇಂದ್ರೀಕರಣಕ್ಕೆ ಅವಕಾಶ ಕಲ್ಪಿಸಲಿದೆ. ಇದರ ಅನುಷ್ಠಾನಕ್ಕಾಗಿ ತಮಿಳು ಸಮುದಾಯ ಆಗ್ರಹಪಡಿಸುತ್ತಿದೆ. 1987ರ ಭಾರತ–ಶ್ರೀಲಂಕಾ ಒಪ್ಪಂದದ ಭಾಗವಾಗಿ ಶ್ರೀಲಂಕಾ ಸಂವಿಧಾನಕ್ಕೆ 13ನೇ ತಿದ್ದುಪಡಿ ತಂದಿದೆ.  ಭಾರತ ಮತ್ತು ಶ್ರೀಲಂಕಾದ ರಾಜತಾಂತ್ರಿಕ ಬಾಂಧವ್ಯಕ್ಕೆ ಈಗ 75ನೇ ವರ್ಷ ಎಂದು ಉಲ್ಲೇಖಿಸಿದ ಪ್ರಧಾನಿ ಇದರ ನೆನಪಿಗಾಗಿ ಶ್ರೀಲಂಕಾದ ತಮಿಳು ಸಮುದಾಯದವರ ಏಳಿಗೆಗಾಗಿ ₹ 75 ಕೋಟಿ ವೆಚ್ಚದ ವಿವಿಧ ಯೋಜನೆಗಳನ್ನು ಪ್ರಕಟಿಸಿದರು. ತಮಿಳು ಸಮುದಾಯದವರು ಶ್ರೀಲಂಕಾಗೆ ಪ್ರವೇಶಿಸಿ 200 ವರ್ಷಗಳಾಗಲಿವೆ. ವಿವಿಧ ಯೋಜನೆಗಳ ಜೊತೆಗೆ ಶ್ರೀಲಂಕಾದ ಉತ್ತರ ಮತ್ತು ಪೂರ್ವ ವಲಯದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಲಿದೆ ಎಂದು ಹೇಳಿದರು. ವಿಕ್ರಮಸಿಂಘೆ ಅವರು ಇದೇ ಸಂದರ್ಭದಲ್ಲಿ ಸಮನ್ವಯ ಅಧಿಕಾರ ಹಂಚಿಕೆ ಉತ್ತರ ಭಾಗದ ಅಭಿವೃದ್ಧಿ ಕುರಿತಂತೆ ವಿಸ್ತೃತ ಪ್ರಸ್ತಾವಗಳಿವೆ. ಪೂರಕವಾಗಿ ಕಾಯ್ದೆ ರೂಪಿಸಲು ಸರ್ಕಾರ ಮಸೂದೆಯನ್ನು ಮಂಡಿಸಲಿದೆ ಎಂದು ಮೋದಿ ಅವರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT