ನವದೆಹಲಿ: ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಮುಂದಿನ ಸಭೆ ಮುಂಬೈನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ನಡೆಯಲಿದೆ. ಎರಡೂ ದಿನ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಎಲ್ಲ ನಾಯಕರು ಒಪ್ಪಿದ್ದಾರೆ.
ಆಗಸ್ಟ್ 31ರಂದು ‘ಇಂಡಿಯಾ’ದ ನಾಯಕರು ಅನೌಪಚಾರಿಕವಾಗಿ ಒಂದೆಡೆ ಸೇರಲಿದ್ದಾರೆ. ಸೆಪ್ಟೆಂಬರ್ 1ರಂದು ಮುಖ್ಯ ಸಭೆ ನಡೆಯಲಿದ್ದು ಅದೇ ದಿನ ಸಂಜೆ ಪತ್ರಿಕಾಗೋಷ್ಠಿ ನಡೆಸಲಾಗುವುದು ಎಂದು ‘ಇಂಡಿಯಾ’ ಮೈತ್ರಿಕೂಟದ ನಾಯಕರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಭೆಯ ಸ್ವರೂಪದಲ್ಲೇ ಈ ಸಭೆ ನಡೆಯಲಿದೆ. ಮುಂಬೈನ ಪೊವಾಯಿ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ. ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಶಿವಸೇನಾ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಮತ್ತು ಕಾಂಗ್ರೆಸ್ ಜಂಟಿಯಾಗಿ ‘ಇಂಡಿಯಾ’ದ ಮೂರನೇ ಸಭೆ ಆಯೋಜನೆ ಮಾಡಿವೆ.
ವಿರೋಧಪಕ್ಷಗಳ ಮೈತ್ರಿಕೂಟದ 2ನೇ ಸಭೆಯು ಬೆಂಗಳೂರಿನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಪಕ್ಷಗಳ ನಡುವೆ ಸಮನ್ವಯಕ್ಕಾಗಿ 11 ಸದಸ್ಯರ ಸಮಿತಿ ರಚಿಸಲಾಗುವುದು ಹಾಗೂ ಮುಂಬೈನಲ್ಲಿ ನಡೆಯಲಿರುವ ಮುಂದಿನ ಸಭೆಯಲ್ಲಿ ಸಂಚಾಲಕರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.