ನವದೆಹಲಿ: ಮುಡಾ ಹಗರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಿಟ್ ಅರ್ಜಿ ವಜಾ ಕುರಿತಂತೆ ಬಿಜೆಪಿ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಿಬಲ್, 'ಈಗ ಕರ್ನಾಟಕದಲ್ಲಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮೋಸದ ಮಾರ್ಗವನ್ನು ಅನುಸರಿಸುತ್ತಿದೆ' ಎಂದು ಕುಟುಕಿದ್ದಾರೆ.
'ಶಾಸಕರಿಗೆ ಆಮಿಷ ಒಡ್ಡುವುದು, 10ನೇ ಅನುಸೂಚಿಯ ದುರುಪಯೋಗ, ಇ.ಡಿ-ಸಿಬಿಐ ದಾಳಿಯಿಂದ ಭಯ ಸೃಷ್ಟಿಸುವುದು, ಸಾಂವಿಧಾನಿಕ ಜವಾಬ್ದಾರಿಯನ್ನು ಮೀರಿ ರಾಜ್ಯಪಾಲರ ವರ್ತನೆ' ಎಂದು ಸಿಬಲ್ ಪಟ್ಟಿ ಮಾಡಿದ್ದಾರೆ.
'ಇವೆಲ್ಲದರ ಬಳಿಕ ಅವರು ಹೇಳುತ್ತಾರೆ, ಬಿಜೆಪಿಯ ಪಾಲಿಗೆ ಸಂವಿಧಾನವು ಪವಿತ್ರ ಗೀತೆಗಿಂತಲೂ ಮಿಗಿಲಾದದ್ದು' ಎಂದು ಕಪಿಲ್ ವ್ಯಂಗ್ಯವಾಡಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಎದುರಾಗಿದೆ. ತಮ್ಮ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿತ್ತು. ಆ ಮೂಲಕ ತನಿಖೆಗೆ ಅಸ್ತು ಎಂದಿದೆ.