ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಎಲ್‌ ಅವಧಿ ಮುಗಿದರೂ ಅಪಘಾತ ಸಂತ್ರಸ್ತರಿಗೆ ಪರಿಹಾರ ಭರಿಸಬೇಕು: ಬಾಂಬೆ ಹೈಕೋರ್ಟ್‌

ಬಾಂಬೆ ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ
Published 1 ಜೂನ್ 2023, 16:52 IST
Last Updated 1 ಜೂನ್ 2023, 16:52 IST
ಅಕ್ಷರ ಗಾತ್ರ

ಮುಂಬೈ: ಅಪಘಾತ ಮಾಡಿದ ವಾಹನ ಚಾಲಕನ ಚಾಲನಾ ಪರವಾನಗಿ (ಡಿ.ಎಲ್‌) ಅವಧಿ ಮುಗಿದು, ಅದು ನವೀಕರಣಗೊಂಡಿಲ್ಲದಿದ್ದರೂ ಅಪಘಾತದಲ್ಲಿ ಮೃತಪ‍ಟ್ಟವರ ಸಂಬಂಧಿಕರಿಗೆ ವಿಮಾ ಕಂಪನಿಯು ಪರಿಹಾರ ನೀಡಲೇಬೇಕು ಎಂದು ಬಾಂಬೆ ಹೈಕೋರ್ಟ್‌ ತೀರ್ಪು ನೀಡಿದೆ.

‘ಅಪಘಾತಕ್ಕೀಡಾದ ವಾಹನದ ಚಾಲಕನ ಚಾಲನಾ ಪರವಾನಗಿ ನವೀಕರಣವಾಗಿರದಿದ್ದಲ್ಲಿ ಆತ/ಆಕೆ ನುರಿತ ಚಾಲಕರಲ್ಲವೆಂದು ಅರ್ಥವಲ್ಲ’ ಎಂದು ನ್ಯಾಯಮೂರ್ತಿ ಎಸ್‌.ಜಿ. ದಿಗೆ ಅವರಿದ್ದ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

2011ರ ನವೆಂಬರ್‌ನಲ್ಲಿ ಪುಣೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ಗೆ ಏಕಸದಸ್ಯ ಪೀಠವು ಆದೇಶ ನೀಡಿದ್ದು, ಅದರ ಪ್ರತಿ ಗುರುವಾರ ಲಭ್ಯವಾಗಿದೆ. 

ಪುಣೆಯಲ್ಲಿ ಆಶಾ ಬವಿಸ್ಕರ್ ಎಂಬ ಮಹಿಳೆ ಬೈಕಿನಲ್ಲಿ ಹಿಂಬದಿ ಸವಾರರಾಗಿ ಹಡಪಸರ್‌ ಕಡೆಗೆ ಸಾಗುತ್ತಿದ್ದಾಗ, ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಬವಿಸ್ಕರ್‌ ಅವರು ಲಾರಿಯ ಕೆಳಗೆ ಬಿದ್ದು ಮೃತಪಟ್ಟಿದ್ದರು. 

ಅಪಘಾತ ಸಂಭವಿಸಿದಾಗ ಟ್ರಕ್‌ ವಿಮೆ ಹೊಂದಿತ್ತು. ಆದರೆ, ವಾಹನ ಚಾಲಕನ ಪರವಾನಗಿ ಅವಧಿ ಮುಗಿದಿದ್ದರಿಂದ, ಮೃತ ಮಹಿಳೆಯ ಕುಟುಂಬಕ್ಕೆ ಟ್ರಕ್ ಮಾಲೀಕರು ಪರಿಹಾರ ನೀಡಬೇಕೆಂದು ನ್ಯಾಯಮಂಡಳಿ ಸೂಚಿಸಿತ್ತು. ಇದನ್ನು ಪ್ರಶ್ನಿಸಿ, ಸಂತ್ರಸ್ತರಿಗೆ ಯಾರು ಪರಿಹಾರ ನೀಡಬೇಕೆನ್ನುವುದನ್ನು ಖಾತ್ರಿಪಡಿಸುವಂತೆ ಕೋರಿ ಮೃತ ಮಹಿಳೆಯ ಕುಟುಂಬ ಸದಸ್ಯರು ಹೈಕೋರ್ಟ್‌ ಮೊರೆ ಹೋಗಿದ್ದರು.   

ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠವು ಟ್ರಕ್‌, ವಿಮಾ ಕಂಪನಿಯ ವಿಮೆಗೆ ಒಳಪಟ್ಟಿರುವುದನ್ನು ಗಮನಿಸಿ, ಆರು ವಾರಗಳ ಒಳಗೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಮತ್ತು ವಾಹನದ ಮಾಲೀಕನಿಂದ ಅದನ್ನು ವಸೂಲಿ ಮಾಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.

ವಾಹನ ಚಾಲನೆ ಮಾಡುವಾಗ ಚಾಲಕರು, ಅಪಘಾತ ಸಂಭವಿಸಿದ ಸಮಯದಲ್ಲಿ ಮೌಲಿಕವಾದ ಚಾಲನಾ ಪರವಾನಗಿ ಹೊಂದಿರದಿದ್ದರೆ, ವಿಮಾ ಕಂಪನಿಯು ಮೊದಲು ಪರಿಹಾರ ಪಾವತಿಸಬೇಕು ಮತ್ತು ನಂತರ ವಾಹನದ ಮಾಲೀಕನಿಂದ ಅದನ್ನು ವಸೂಲಿ ಮಾಡಿಕೊಳ್ಳಬೇಕು ಎಂದು ಪೀಠವು ಸ್ಪಷ್ಟವಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT