ಗಾತಿರುವನಂತಪುರ: ಕಣ್ಣೂರಿನ ಉಡುಪು ತಯಾರಿಕಾ ಉದ್ಯಮ 'ಮರ‍್ಯಾನ್ ಅಪರೆಲ್', ಇಸ್ರೇಲ್–ಗಾಜಾ ಸಂಘರ್ಷ ಕೊನೆಗೊಳ್ಳುವವರೆಗೆ ಇಸ್ರೇಲ್ ಪೊಲೀಸರಿಗಾಗಿ ಸಮವಸ್ತ್ರ ತಯಾರಿಸದಿರಲು ಮತ್ತು ಹೊಸ ಗುತ್ತಿಗೆ ಪಡೆಯದಿರಲು ನಿರ್ಧರಿಸಿದೆ. ಇಸ್ರೇಲ್ ಪೊಲೀಸರಿಗೆ 2015ರಿಂದ ಸಮವಸ್ತ್ರ ಪೂರೈಕೆ ಮಾಡುತ್ತಿರುವ ಈ ಉದ್ಯಮವು ನೈತಿಕ ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.
'ಶಾಂತಿ ಮರುಸ್ಥಾಪನೆಗೊಳ್ಳುವವರೆಗೆ ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಪೂರೈಸುವ ಹೊಸ ಒಪ್ಪಂದ ಮಾಡಿಕೊಳ್ಳದಿರಲು ನಿರ್ದರಿಸಿದ್ದೇವೆ. ಗಾಜಾ ಪಟ್ಟಿ ಆಸ್ಪತ್ರೆ ಮೇಲಿನ ಬಾಂಬ್ ದಾಳಿ ಮತ್ತು ಸಾವಿರಾರು ಅಮಾಯಕರು ಸಾವಿಗೀಡಾದ ಇತ್ತೀಚಿನ ಪ್ರಕರಣಗಳನ್ನು ಗಮನದಲ್ಲಿರಿಸಿ ನೈತಿಕ ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದೇವೆ' ಎಂದು 'ಮರ‍್ಯಾನ್ ಅಪರೆಲ್' ವ್ಯವಸ್ಥಾಪಕ ನಿರ್ದೇಶಕ ಥಾಮಸ್ ಒಲಿಕಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಉದ್ಯಮವು ಇಸ್ರೇಲ್ ಪೋಲೀಸರಿಗೆ ಸಮವಸ್ತ್ರ ಪೂರೈಸಲು ಈ ಹಿಂದೆ ಮಾಡಿಕೊಂಡಿದ್ದ ಎಲ್ಲ ಒಪ್ಪಂದಗಳನ್ನೂ ಪೂರ್ಣಗೊಳಿಸಿದ್ದೇವೆ ಎಂದಿರುವ ಒಲಿಕಲ್, ಶೀಘ್ರದಲ್ಲೇ ಶಾಂತಿ ಮರುಸ್ಥಾಪನೆಯಾಗುವ ಭರವಸೆ ಇದೆ ಎಂದಿದ್ದಾರೆ.
ಕೇರಳ ಕೈಗಾರಿಕಾ ಸಚಿವ ಹಾಗೂ ಸಿಪಿಐ (ಎಂ) ಹಿರಿಯ ನಾಯಕ ಪಿ.ರಾಜೀವ್ ಅವರು, 'ಮರ‍್ಯಾನ್ ಅಪರೆಲ್' ನಿಲುವಿಗೆ ಅಂತರರಾಷ್ಟ್ರೀಯ ಮನ್ನಣೆ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಲವು ವರ್ಷಗಳಿಂದ ಇಸ್ರೇಲ್ ಪೊಲೀಸರಿಗೆ ವಾರ್ಷಿಕ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಮವಸ್ತ್ರಗಳನ್ನು ಪೂರೈಸುತ್ತಿರುವ ಈ ಉದ್ಯಮ, ಈ ವರ್ಷವೂ ಆದೇಶಗಳನ್ನು ಪಡೆದುಕೊಂಡಿತ್ತು.
ಮುಂಬೈ ಪ್ರಧಾನ ಕಛೇರಿಯನ್ನು ಹೊಂದಿರುವ ಈ ಉದ್ಯಮವು, ಕಣ್ಣೂರಿನ ಕೂತುಪರಂಬದಲ್ಲಿ ಕಾರ್ಖಾನೆಯನ್ನು ಹೊಂದಿದೆ. ಸಂಸ್ಥೆಯು ವಿವಿಧ ದೇಶಗಳ ವಿವಿಧ ಏಜೆನ್ಸಿಗಳಿಗೂ ಸಮವಸ್ತ್ರ ಪೂರೈಸುತ್ತಿದೆ.
ಕೇರಳದಲ್ಲಿ ಇಸ್ರೇಲ್ ನಡೆಯ ಬಗ್ಗೆ ರಾಜಕೀಯ ಭಿನ್ನಾಭಿಪ್ರಾಯವಿದ್ದರೂ, ಇಸ್ರೇಲ್ ಪೊಲೀಸ್ ಪಡೆಯೊಂದಿಗಿನ ದೃಢವಾದ ವ್ಯಾಪಾರ ಸಂಬಂಧ ಮುಂದುವರಿದಿದೆ. ಉಡುಪು ತಯಾರಿಕಾ ಸಂಸ್ಥೆಯು ಸಮವಸ್ತ್ರ ಪೂರೈಕೆ ಮುಂದುವರಿಸಿದೆ ಎಂದು 'ಡೆಕ್ಕನ್ ಹೆರಾಲ್ಡ್' ಈ ಹಿಂದೆ ವರದಿ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.