ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಲೇಪನದಿಂದ ಶೃಂಗಸಭೆ ಮುಕ್ತ: ರಷ್ಯಾ ಶ್ಲಾಘನೆ

Published 10 ಸೆಪ್ಟೆಂಬರ್ 2023, 14:34 IST
Last Updated 10 ಸೆಪ್ಟೆಂಬರ್ 2023, 14:34 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯು ಜಾಗತಿಕ ದಕ್ಷಿಣ ರಾಷ್ಟ್ರಗಳ ಸಾಮರ್ಥ್ಯ ಪ್ರದರ್ಶನದ ಜೊತೆಗೆ ಅವುಗಳ ಪ್ರಾಮುಖ್ಯವನ್ನು ಒತ್ತಿ ಹೇಳಿದೆ. ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು ದಾರಿ ತೋರಿಸಿದೆ. ಹಲವು ಆಯಾಮಗಳ ಮಹತ್ವಪೂರ್ಣವಾದ ಸಭೆಯಾಗಿದೆ ಎಂದು ರಷ್ಯಾ ಪ್ರತಿಪಾದಿಸಿದೆ.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆ ಲಾವ್ರೊವ್, ‘ಉಕ್ರೇನ್‌ ಸಂಘರ್ಷ ಸೇರಿದಂತೆ ಹಲವು ವಿಷಯಗಳ ಮೇಲೆ ಪಶ್ಚಿಮ ರಾಷ್ಟ್ರಗಳ ಹಿಡಿತ ತಪ್ಪಿಸುವಲ್ಲಿ ಭಾರತ ಪ್ರಧಾನ ಪಾತ್ರವಹಿಸಿದೆ’ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

‘ಶೃಂಗಸಭೆಯನ್ನು ರಾಜಕೀಯಗೊಳಿಸಲಿಲ್ಲ. ಇದಕ್ಕಾಗಿ ನಾನು ಭಾರತಕ್ಕೆ ಆಭಾರಿಯಾಗಿದ್ದೇನೆ. ಪಶ್ಚಿಮ ರಾಷ್ಟ್ರಗಳ ಆಧಿಪತ್ಯ ಮುಂದುವರಿಯುವುದಕ್ಕೆ ತಡೆ ನೀಡಿದೆ’ ಎಂದರು. 

ವಿಶ್ವದಾದ್ಯಂತ ಮಿಲಿಟರಿ ಸಂಘರ್ಷಗಳನ್ನು ವಿಶ್ವಸಂಸ್ಥೆಯ ಸನ್ನದು ಅನ್ವಯವೇ ಬಗೆಹರಿಸಿಕೊಳ್ಳಬೇಕು ಎಂಬ ಸಂದೇಶವನ್ನು ‘ನವದೆಹಲಿ ಘೋಷಣೆ’ಯು ರವಾನಿಸಿದೆ. ವಿವಿಧ ಬಿಕ್ಕಟ್ಟುಗಳಿಗೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ಶಕ್ತಿಗಳು ತಮ್ಮ ಪರಿಹಾರದ ಕಲ್ಪನೆಗಳೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ ಎಂದರು.

‘ಸಭೆಯು ಜಾಗತಿಕ ಆಡಳಿತ ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ನ್ಯಾಯಸಮ್ಮತ ಹಾದಿ ತೋರಿದೆ ಎಂದ ಅವರು, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಅಭಿವೃದ್ಧಿಶೀಲ ದೇಶಗಳಿಗೆ 100 ಬಿಲಿಯನ್‌ ಅಮೆರಿಕನ್‌ ಡಾಲರ್‌ ನೆರವು ನೀಡುವುದಾಗಿ ಪಶ್ಚಿಮ ರಾಷ್ಟ್ರಗಳು ಭರವಸೆ ನೀಡಿದ್ದವು. ಆದರೆ, ಅದು ಈಡೇರಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT