ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌| ಜಲಂಧರ ಲೋಕಸಭಾ ಕ್ಷೇತ್ರ: ಎಎಪಿಯ ಸುಶೀಲ್‌ಗೆ ಜಯ

Published 13 ಮೇ 2023, 14:58 IST
Last Updated 13 ಮೇ 2023, 14:58 IST
ಅಕ್ಷರ ಗಾತ್ರ

ಚಂಡೀಗಢ (ಪಿಟಿಐ): ಪಂಜಾಬ್‌ನ ಜಲಂಧರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಸುಶೀಲ್‌ ಕುಮಾರ್ ರಿಂಕು ಅವರು 58 ಸಾವಿರಕ್ಕೂ ಅಧಿಕ ಮತಗಳ ಭಾರಿ ಅಂತರದಿಂದ ಜಯ ಸಾಧಿಸಿದ್ದಾರೆ.

ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಕರಂಜಿತ್ ಕೌರ್ ಚೌಧರಿ ಅವರನ್ನು ಸೋಲಿಸಿದ್ದಾರೆ. ಕಳೆದ ಐದು ದಶಕಗಳಿಂದಲೂ ಜಲಂಧರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು.

ಸುಶೀಲ್‌ ಕುಮಾರ್‌ ರಿಂಕು ಅವರಿಗೆ 3,02,097 ಮತಗಳು ಚಲಾವಣೆಯಾಗಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಕೌರ್‌ಗೆ 2,43,450 ಮತಗಳು ಲಭಿಸಿದವು.

ಕರಂಜಿತ್‌ ಕೌರ್ ಅವರ ಪತಿ ಹಾಗೂ ಸಂಸದರಾಗಿದ್ದ ಸಂತೋಖ್ ಸಿಂಗ್‌ ಚೌಧರಿ ಅವರು ಜನವರಿಯಲ್ಲಿ ನಿಧನರಾಗಿದ್ದರು. ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂತೋಖ್‌ ಸಿಂಗ್, ಹೃದಯಸ್ತಂಭದಿಂದಾಗಿ ನಿಧನರಾಗಿದ್ದರು.

ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಮೇ 10ರಂದು ಮತದಾನ ನಡೆದಿತ್ತು. ಕಣದಲ್ಲಿ 19 ಅಭ್ಯರ್ಥಿಗಳಿದ್ದರು. ಶೇ 54.70ರಷ್ಟು ಮತದಾನವಾಗಿತ್ತು.

‘ಉಪಚುನಾವಣೆಯಲ್ಲಿ ಜಯಶಾಲಿಯಾಗಿರುವ ಸುಶೀಲ್‌ ರಿಂಕು ಹಾಗೂ ಎಎಪಿಗೆ ಅಭಿನಂದನೆ ಸಲ್ಲಿಸುವೆ. ಜನರ ತೀರ್ಪನ್ನು ವಿನಮ್ರರಾಗಿ ಸ್ವೀಕರಿಸುತ್ತೇವೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಕಾರ್ಯ ನಿರ್ವಹಿಸಿದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಪಂಜಾಬ್‌ನ ಕಾಂಗ್ರೆಸ್‌ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಕಾಂಗ್ರೆಸ್‌ನ ಪಂಜಾಬ್‌ ಘಟಕದ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್‌ ಟ್ವೀಟ್‌ ಮಾಡಿದ್ದಾರೆ.

‘ಅಭೂತಪೂರ್ವ ಗೆಲುವು‘(ನವದೆಹಲಿ ವರದಿ): ‘ಪಕ್ಷದ ಅಭ್ಯರ್ಥಿ ಸುಶೀಲ್‌ ಕುಮಾರ್‌ ರಿಂಕು ಅವರ ಅಭೂತಪೂರ್ವ ಗೆಲುವಿಗೆ ಮುಖ್ಯಮಂತ್ರಿ ಭಗವಂತ್‌ ಮಾನ್‌ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಕಾರಣ’ ಎಂದು ಎಎಪಿ ಸಂಚಾಲಕರೂ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿಯಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ರಾಜಕೀಯ ಮಾಡುತ್ತೇವೆ. ಈಗ, ಪಂಜಾಬ್‌ನ ಜನರು ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರ ಕಾರ್ಯಗಳಿಗೆ ಮುದ್ರೆಯೊತ್ತುವ ಮೂಲಕ, ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ’ ಎಂದು ಹೇಳಿದರು.

ಉತ್ತರ ಪ್ರದೇಶ: ಛಾನ್ಬೆ– ಅಪ್ನಾದಳ ಅಭ್ಯರ್ಥಿಗೆ ಗೆಲುವು

ಮಿರ್ಜಾಪುರ (ಉತ್ತರ ಪ್ರದೇಶ)(ಪಿಟಿಐ): ಉತ್ತರ ಪ್ರದೇಶದ ಛಾನ್ಬೆ (ಎಸ್‌ಸಿ ಮೀಸಲು) ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳ (ಸೋನೆಲಾಲ್) ಅಭ್ಯರ್ಥಿ ರಿಂಕಿ ಕೋಲ್‌ ಅವರು 9,587 ಮತಗಳ ಅಂತರದಿಂದ ಶನಿವಾರ ಜಯ ಗಳಿಸಿದ್ದಾರೆ.

ಅವರು ತಮ್ಮ ಪ್ರತಿಸ್ಪರ್ಧಿ, ಸಮಾಜವಾದಿ ಪಕ್ಷದ ಕೀರ್ತಿ ಕೋಲ್‌ ಅವರನ್ನು ಸೋಲಿಸಿದ್ದಾರೆ. ರಿಂಕಿ ಅವರಿಗೆ 76,203 ಮತಗಳು ಬಿದ್ದಿದ್ದರೆ, ಕೀರ್ತಿ ಕೋಲ್‌ 66,616 ಮತಗಳನ್ನು ಪಡೆದಿದ್ದಾರೆ.

ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅಪ್ನಾ ದಳ (ಸೋನೆಲಾಲ್‌) ಪಕ್ಷದ ರಾಹುಲ್‌ ಪ್ರಕಾಶ್‌ ಕೋಲ್ ಅವರು ಫೆಬ್ರುವರಿಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಮೇ 10ರಂದು ಮತದಾನ ನಡೆದಿತ್ತು. ಕಣದಲ್ಲಿ ಒಟ್ಟು ಎಂಟು ಅಭ್ಯರ್ಥಿಗಳಿದ್ದರು. ಬಿಎಸ್‌ಪಿ ಅಭ್ಯರ್ಥಿ ಸ್ಪರ್ಧಿಸಿರಲಿಲ್ಲ.

ಪಕ್ಷದ ಮುಖ್ಯಸ್ಥೆ ಹಾಗೂ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್‌ ಅವರು ಮಿರ್ಜಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಸ್ವಾರ್ ಕ್ಷೇತ್ರದಲ್ಲೂ ಗೆಲುವು: ಸ್ವಾರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅಪ್ನಾ ದಳ (ಸೋನೆಲಾಲ್) ಪಕ್ಷದ ಅಭ್ಯರ್ಥಿ ಶಫೀಕ್‌ ಅಹ್ಮದ್ ಅನ್ಸಾರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು ಕಳೆದ ನಾಲ್ಕು ದಶಕಗಳಿಂದ ಈ ಕ್ಷೇತ್ರದ ಮೇಲೆ ಹೊಂದಿದ್ದ ಹಿಡಿತವನ್ನು ಕೊನೆಗಾಣಿಸಿದಂತಾಗಿದೆ.

ಶಫೀಕ್‌ ಅವರು ತಮ್ಮ ಪ್ರತಿಸ್ಪರ್ಧಿ, ಸಮಾಜವಾದಿ ಪಕ್ಷದ ಅನುರಾಧಾ ಚೌಹಾಣ್ ಅವರನ್ನು ಸೋಲಿಸಿದ್ದಾರೆ. ಶಫೀಕ್‌ 68,630 ಮತಗಳನ್ನು ಪಡೆದರೆ, ಅನುರಾಧಾ 59,906 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳು ಸ್ಪರ್ಧಿಸಿರಲಿಲ್ಲ.

ಕ್ಷೇತ್ರದಿಂದ ಆಯ್ಕೆಯಾಗಿದ್ದ ಅಬ್ದುಲ್ಲ ಅಜಮ್‌ ಖಾನ್‌ ಅವರಿಗೆ ಪ್ರಕರಣವೊಂದರಲ್ಲಿ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.

ಒಡಿಶಾ: ಝರ್ಸುಗುಡಾ– ಬಿಜೆಡಿಯ ದೀಪಾಲಿಗೆ ಗೆಲುವು

ಭುವನೇಶ್ವರ (ಪಿಟಿಐ): ಝರ್ಸುಗುಡಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಡಿ ಪಕ್ಷದ ಅಭ್ಯರ್ಥಿ ದೀಪಾಲಿ ದಾಸ್‌ ಜಯಶಾಲಿಯಾಗಿದ್ದಾರೆ.

ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಬಿಜೆಪಿಯ ತಂಕಾಧರ ತ್ರಿಪಾಠಿ ಅವರನ್ನು 48,721 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಆರೋಗ್ಯ ಸಚಿವರಾಗಿದ್ದ ನಬಕಿಶೋರ್ ದಾಸ್ ಅವರ ಹತ್ಯೆಯಿಂದಾಗಿ ಶಾಸಕ ಸ್ಥಾನ ತೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT