ಗುಲಾಬ್‌ಗರ್: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಮತ್ತೆ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಭಯೋತ್ಪಾದನೆ ಮತ್ತೆ ಮೇಲೇಳದ ಹಂತಕ್ಕೆ ನಾಮಾವಶೇಷ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಿಸ್ತ್‌ವಾರದಲ್ಲಿ ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಯು ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.
‘ಮತ್ತೆ ಮೇಲೇಳದ ಹಂತಕ್ಕೆ ಭಯೋತ್ಪಾದನೆಯನ್ನು ನಾವು ನಾಮಾವಶೇಷ ಮಾಡುತ್ತೇವೆ. ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ಪ್ರಸ್ತಾಪದ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಭಯೋತ್ಪಾದನೆಯನ್ನು ಮತ್ತೆ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗ ಇರುವುದು ಮೋದಿ ಸರ್ಕಾರ. ಹಾಗಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪುನಃಸ್ಥಾಪಿಸುವ ಶಕ್ತಿ ಯಾರಿಗೂ ಇಲ್ಲ’ ಎಂದು ಪದ್ದೇರ್–ನಾಗಸೇನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮಂತ್ರಿ ಸುನಿಲ್ ಶರ್ಮಾ ಪರ ಪ್ರಚಾರದ ಸಂದರ್ಭ ಅಮಿತ್ ಶಾ ಹೇಳಿದ್ದಾರೆ.
’ಇದು ಎರಡು ಶಕ್ತಿಗಳ ನಡುವಿನ ಚುನಾವಣೆಯಾಗಿದೆ. ಒಂದು ಕಡೆ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಹಾಗೂ ಮತ್ತೊಂದು ಕಡೆ ಬಿಜೆಪಿ ಇದೆ. ನಾವು ಅಧಿಕಾರಕ್ಕೆ ಬಂದರೆ 370ನೇ ವಿಧಿಯಡಿ ನೀಡಲಾಗಿದ್ದ ಸ್ಥಾನಮಾನವನ್ನು ಮರುಸ್ಥಾಪಿಸುವುದಾಗಿ ಎನ್‌ಸಿ–ಕಾಂಗ್ರೆಸ್ ಹೇಳುತ್ತಿವೆ. ಅದನ್ನು ಪುನಃಸ್ಥಾಪಿಸಬೇಕೇ ಹೇಳಿ? ಪಹಾರಿಗಳು, ಗುಜ್ಜರ್ ಮತ್ತಿತರರಿಗೆ ಬಿಜೆಪಿ ನೀಡಿರುವ ಮೀಸಲಾತಿಯನ್ನು ಕಸಿದುಕೊಳ್ಳಲಾಗುತ್ತದೆ’ಎಂದಿದ್ದಾರೆ.
‘ಆದರೆ, ನೀವು ಮರುಗುವ ಅಗತ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ. ಅಬ್ದುಲ್ಲಾ ಆಗಲಿ, ರಾಹುಲ್ ಆಗಲಿ ಇಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ’ಎಂದು ಶಾ ಹೇಳಿದ್ದಾರೆ.
ಕಳೆದ 15 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಗೃಹ ಸಚಿವರ 2ನೇ ಭೇಟಿ ಇದಾಗಿದೆ. ಸೆಪ್ಟೆಂಬರ್ 6 ಮತ್ತು 7ರಂದು ಭೇಟಿ ನೀಡಿದ್ದ ಅವರು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು.
ಪದ್ದೇರ್–ನಾಗಸೇನಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಸೆಪ್ಟೆಂಬರ್ 18ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 25 ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಇಂದು ತೆರೆಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.