ಸೆರೈಕೆಲಾ (ಜಾರ್ಖಂಡ್): ದೇಶದಾದ್ಯಂತ ಸುದ್ದಿಯಾಗಿದ್ದ ತಬ್ರೇಜ್ ಅನ್ಸಾರಿ ಹತ್ಯೆ ಪ್ರಕರಣದ ಎಲ್ಲಾ ಹತ್ತು ಮಂದಿ ಅಪರಾಧಿಗಳಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ಸೆರೈಕೆಲಾ-ಖರ್ಸ್ವಾನ್ ಜಿಲ್ಲಾ ನ್ಯಾಯಾಲಯವು ಬುಧವಾರ ತೀರ್ಪು ನೀಡಿದೆ.
ಹೆಚ್ಚುವರಿ ಒಂದನೇ ಜಿಲ್ಲಾ ನ್ಯಾಯಾಧೀಶ ಅಮಿತ್ ಶೇಖರ್ ಅವರು ಬಿಗಿಭದ್ರತೆ ನಡುವೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಿಕ್ಷೆ ಹಾಗೂ ತಲಾ ₹15 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.
ಪುಣೆಯಲ್ಲಿ ಕಾರ್ಮಿಕರಾಗಿದ್ದ ಅನ್ಸಾರಿ (24) ಅವರು, 2019ರ ಜೂನ್ 17ರಂದು ಈದ್ ಆಚರಣೆಗಾಗಿ ಹುಟ್ಟೂರು ಧಟ್ಕಿಡಿ ಗ್ರಾಮಕ್ಕೆ ಬಂದಿದ್ದರು. ಅಂದು ರಾತ್ರಿ ಮೋಟಾರ್ ಸ್ಕೂಟರ್ ಕಳವಿಗೆ ಯತ್ನಿಸಿದ್ದಾರೆ ಎಂಬ ಶಂಕೆ ಮೇಲೆ ಗುಂಪೊಂದು ಅವರನ್ನು ಕಂಬಕ್ಕೆ ಕಟ್ಟಿ ಹಾಕಿ ಇಡೀ ರಾತ್ರಿ ಥಳಿಸಿತ್ತು.
ಜೈ ಶ್ರೀರಾಮ್, ಜೈ ಹನುಮಾನ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಘಟನೆ ನಡೆದ ಐದು ದಿನಗಳ ಬಳಿಕ ಅನ್ಸಾರಿ ಮೃತಪಟ್ಟಿದ್ದರು.
ಆ ವೇಳೆ ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರದ ಆಡಳಿತವಿತ್ತು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಸಂಸತ್‌ನಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಈ ವಿಷಯ ಪ್ರಸ್ತಾಪಿಸಿದ್ದರಿಂದ ಕಲಾಪಕ್ಕೂ ಅಡ್ಡಿಯಾಗಿತ್ತು.
ಆಗ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಹರಿಹಾಯ್ದಿದ್ದರು. ಇದಕ್ಕೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ‘ಈ ಘಟನೆ ನೋವು ತಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು.
ಪ್ರಮುಖ ಆರೋಪಿ ಪ್ರಕಾಶ್ ಮಂಡಲ್ ಅಲಿಯಾಸ್ ಪಪ್ಪು ಮಂಡಲ್ ಈಗಾಗಲೇ ಜೈಲಿನಲ್ಲಿದ್ದು, ಉಳಿದವರನ್ನು ಕಳೆದ ವಾರ ಪೊಲೀಸರು ವಶಕ್ಕೆ ಪಡೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.