ತಿರುವನಂತಪುರ: ಕರ್ನಾಟಕದ ಶಿರೂರಿನಲ್ಲಿ ಸಂಭವಿಸಿದ್ದ ಭೂಕುಸಿತದ ಅವಘಡದ ವೇಳೆ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಅವರ ಪತ್ನಿಗೆ ಉದ್ಯೋಗ ನೀಡಲಾಗುವುದು ಎಂದು ಕೇರಳದ ಸಹಕಾರ ಬ್ಯಾಂಕ್ ಪ್ರಕಟಿಸಿದೆ.
ಅರ್ಜುನ್ ಅವರ ಪತ್ನಿ ಕೃಷ್ಣಪ್ರಿಯಾ ಅವರಿಗೆ ಕಿರಿಯ ಗುಮಾಸ್ತೆ ಹುದ್ದೆಯನ್ನು ನೀಡಲಾಗುವುದು ಎಂದು ವೆಂಬೇರಿ ಸರ್ವೀಸ್ ಕೋ–ಆಪರೇಟಿವ್ ಬ್ಯಾಂಕ್ ತಿಳಿಸಿದೆ. ಚಾಲಕನ ಮನೆಗೆ ಸಮೀಪದಲ್ಲಿಯೇ ಬ್ಯಾಂಕ್‌ನ ಶಾಖೆ ಇದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಅರ್ಜುನ್ ಅವರ ಮನೆಗೆ ಈಗಾಗಲೇ ಭೇಟಿ ನೀಡಿದ್ದು, ಸರ್ಕಾರ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಅರ್ಜುನ್, ಆತ ಚಾಲನೆ ಮಾಡುತ್ತಿದ್ದ ಲಾರಿ ಕರ್ನಾಟಕದ ಶಿರೂರು ಬಳಿ ಗಂಗಾವಳಿ ನದಿಯಲ್ಲಿ ಕೊಚ್ಚಿಹೋಗಿದೆ. ನಾಪತ್ತೆಯಾಗಿರುವ ಅರ್ಜುನ್ ಪತ್ತೆ ಶೋಧ ಕಾರ್ಯ ಪುನರಾರಂಭ ಆಗುವುದನ್ನು ಆತನ ಕುಟುಂಬ ಕಾತುರದಿಂದ ಎದುರುನೋಡುತ್ತಿದೆ.