ಚಂಡೀಗಢ: ‘ಹರಿಯಾಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಬೆಂಬಲವಿಲ್ಲದೆ ಸರ್ಕಾರ ರಚಿಸಲಾಗದು. ಇಡೀ ರಾಜ್ಯ ಬದಲಾವಣೆ ಬಯಸಿದೆ. ಜನರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ’ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.
ಶುಕ್ರವಾರ ಹರಿಯಾಣ ವಿಧಾನಸಭಾ ಚುನಾವಣೆಗೆ ಪಕ್ಷದ ಪರ ಪ್ರಚಾರ ಆರಂಭಿಸಿದ ಅವರು, ‘ಅಕ್ಟೋಬರ್ 5ರಂದು ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅದಿಕಾರ ಕಳೆದುಕೊಳ್ಳುವುದು ನಿಶ್ಚಿತ’ ಎಂದು ಹೇಳಿದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುಶೀಲ್ ಗುಪ್ತಾ ಅವರ ಜೊತೆಗೂಡಿ ಕೇಜ್ರಿವಾಲ್ ಅವರು ಯಮುನಾನಗರ ಜಿಲ್ಲೆಯಲ್ಲಿನ ಜಗಾಧರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಆದರ್ಶ್ ಪಾಲ್ ಪರವಾಗಿ ರೋಡ್ ಶೋ ನಡೆಸಿದರು.
ಕಾಂಗ್ರೆಸ್ ಜೊತೆಗಿನ ಮೈತ್ರಿ ಮಾತುಕತೆ ವಿಫಲವಾದ ಬಳಿಕ ಎಎಪಿ ರಾಜ್ಯದಲ್ಲಿ ಏಕಾಂಗಿಯಾಗಿ ಕಣಕ್ಕಿಳಿದಿದೆ.
‘ಎಎಪಿ ರಾಜ್ಯದಲ್ಲಿ ಗಣನೀಯ ಪ್ರಮಾಣದ ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಇಲ್ಲಿಗೆ ಬರುತ್ತಿದ್ದಂತೆ ನಾನು ಲೆಕ್ಕ ಹಾಕಿದೆ. ಎಎಪಿ ಬೆಂಬಲವಿಲ್ಲದೇ ಸರ್ಕಾರ ರಚನೆ ಅಸಾಧ್ಯ ಎನ್ನುವಷ್ಟು ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ’ ಎಂದು ಕೇಜ್ರಿವಾಲ್ ಹೇಳಿದರು.
ರೋಡ್ ಶೋ ವೇಳೆ ಬಿಜೆಪಿ ವಿರುದ್ಧ ನೇರ ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಹಣದುಬ್ಬರ, ಮಾದಕವಸ್ತು ಸಾಗಣೆ ಹೆಚ್ಚಾಗಿದೆ ಎಂದು ಆರೋಪಿಸಿದರು.
ತಮ್ಮ ವಿರುದ್ಧದ ಪ್ರಕರಣ, ಜೈಲುವಾಸ ಉಲ್ಲೇಖಿಸಿದ ಅವರು, ನನ್ನ ವಿರುದ್ಧ ಅವರು (ಬಿಜೆಪಿ) ಏನೆಲ್ಲಾ ಮಾಡಿದರೋ, ಹರಿಯಾಣದ ಪ್ರತಿಯೊಬ್ಬರು ಅದಕ್ಕೆ ಪ್ರತೀಕಾರ ತೆಗೆದುಕೊಳ್ಳಲಿದ್ದಾರೆ. ಪ್ರತಿ ಮಗುವು ಪ್ರತೀಕಾರ ತೆಗೆದುಕೊಳ್ಳಲಿದೆ ಎಂದರು.
90 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಅಕ್ಟೋಬರ್ 5ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8ರಂದು ಮತಎಣಿಕೆ ನಡೆಯಲಿದೆ.