ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್ಎಸ್‌ ಚಟುವಟಿಕೆ ನಿಷೇಧ; ಕೇರಳ ಸಚಿವರ ಸಮರ್ಥನೆ

Published 26 ಅಕ್ಟೋಬರ್ 2023, 16:28 IST
Last Updated 26 ಅಕ್ಟೋಬರ್ 2023, 16:28 IST
ಅಕ್ಷರ ಗಾತ್ರ

ತಿರುವನಂತಪುರ: ಮಂಡಳಿಯ ವ್ಯಾಪ್ತಿಯ ದೇವಸ್ಥಾನಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸಿ ತಿರುವಾಂಕೂರು ದೇವಸ್ಥಾನ ಮಂಡಳಿಯು ಹೊರಡಿಸಿದ್ದ ಸುತ್ತೋಲೆಯನ್ನು ಕೇರಳದ ಮುಜರಾಯಿ ಸಚಿವರು ಸಮರ್ಥಿಸಿಕೊಂಡಿದ್ದಾರೆ.

‘ಈ ಸುತ್ತೋಲೆ ಉದ್ದೇಶ ಯಾರನ್ನಾದರೂ ದೇವಸ್ಥಾನದ ಆವರಣದಿಂದ ದೂರ ಇಡುವುದಲ್ಲ, ಬದಲಿಗೆ ದೇವಾಲಯಗಳ ಆವರಣದಲ್ಲಿ ಶಾಂತಿಯುತ ವಾತಾವರಣ ಇರಬೇಕು ಎಂಬುದಾಗಿದೆ’ ಎಂದು ಸಚಿವ ಕೆ.ರಾಧಾಕೃಷ್ಣನ್‌ ಗುರುವಾರ ತಿಳಿಸಿದರು.

ಈ ಕುರಿತು ಮೂಡಿರುವ ವಿವಾದವು ಅಪ್ರಸ್ತುತ ಎಂದೂ ಅವರು ಪ್ರತಿಪಾದಿಸಿದರು. ದೇವಸ್ಥಾನ ಮಂಡಳಿ ಆಯುಕ್ತರು ಅ. 20ರಂದು ಸುತ್ತೋಲೆ ಹೊರಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದ್ದರಿಂದ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಪ್ರಾರ್ಥನಾ, ಪೂಜಾ ಸ್ಥಳಗಳು ಎಂದಿಗೂ ಶಾಂತಿಯ ತಾಣಗಳಾಗಿರಬೇಕು. ಎಲ್ಲ ಭಕ್ತರು ಶಾಂತಿಯುತ ವಾತಾವರಣದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಇರಬೇಕು. ಅದರರ್ಥ ದೇಗುಲ ಪ್ರವೇಶಿಸುವ ಯಾರನ್ನಾದರೂ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂಬುದಲ್ಲ ಎಂದರು.

ಮಂಡಳಿ ವ್ಯಾಪ್ತಿಯ ಆಸ್ತಿ, ದೇವಸ್ಥಾನಗಳ ವ್ಯಾಪ್ತಿಯಲ್ಲಿ ಆರ್‌ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ‘ನಾಮ ಜಪ’ ಪ್ರತಿಭಟನೆಯನ್ನು ನಿಷೇಧಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ತಿರುವನಂತಪುರ ಜಿಲ್ಲೆಯ ಶಾರ್ಕರದೇವಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಕಸರತ್ತು ಮತ್ತು ಶಸ್ತ್ರಾಸ್ತ್ರ ತರಬೇತಿ ನಡೆಸುವಂತಿಲ್ಲ ಎಂದು ಸೂಚಿಸಿ ಕೇರಳ ಹೈಕೋರ್ಟ್‌ ಕಳೆದ ತಿಂಗಳಷ್ಟೇ ಆದೇಶವನ್ನು ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT