ಕಾಸರಗೋಡು: ಧರ್ಮಾಧಾರಿತ ರಾಜಕೀಯ ಸಮೀಕರಣಗಳು ಬದಲಾಗದ ಕಾರಣ ಜಿಲ್ಲೆಯಲ್ಲಿ ಚುನಾವಣಾ ಕಾವು ಅಷ್ಟಾಗಿ ಕಾಣಿಸುತ್ತಿಲ್ಲ. ತ್ರಿಕೋನ ಸ್ಪರ್ಧೆಯ ‘ಛಾಯೆ’ ಮೂಡಿರುವ ಜಿಲ್ಲೆಯ ಉತ್ತರ ಭಾಗದ ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳು ಕುತೂಹಲ ಕೆರಳಿಸಿವೆ. ಎಡರಂಗದ ಭದ್ರಕೋಟೆ ಉದುಮ ಸೇರಿದಂತೆ ದಕ್ಷಿಣದ ಮೂರು ಕ್ಷೇತ್ರಗಳಲ್ಲಿ ರಾರಾಜಿಸಲು ಬಿಜೆಪಿ ಹವಣಿಸುತ್ತಿದೆ.

2021ರ ವಿಧಾನಸಭೆ ಚುನಾವಣೆಯಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರದಿಂದ ಕ್ರಮವಾಗಿ ಮುಸ್ಲಿಂ ಲೀಗ್ನ ಎನ್.ಎ ನೆಲ್ಲಿಕುನ್ನು ಮತ್ತು ಎ.ಕೆ.ಎಂ ಅಶ್ರಫ್ ಗೆಲುವು ಸಾಧಿಸಿದ್ದರು. ಉದುಮ ಮತ್ತು ಕಾಞಂಗಾಡ್ ಕ್ಷೇತ್ರಗಳಲ್ಲಿ ಕ್ರಮವಾಗಿ ಸಿಪಿಐನ ಸಿ.ಎಚ್ ಕುಂಞಂಬು ಮತ್ತು ಇ. ಚಂದ್ರಶೇಖರನ್, ತೃಕ್ಕರಿಪುರ ಕ್ಷೇತ್ರದಲ್ಲಿ ಸಿಪಿಎಂನ ಎಂ. ರಾಜಗೋಪಾಲನ್ ಜಯ ಗಳಿಸಿದ್ದರು.

ಈಗ ಹೆಚ್ಚು ಚರ್ಚೆಯಲ್ಲಿರುವ ಕ್ಷೇತ್ರ ಮಂಜೇಶ್ವರ. ಮಂಜೇಶ್ವರ ಪೇಟೆಯಲ್ಲಿ ಲಾಟರಿ ಅಂಗಡಿ ಇಟ್ಟುಕೊಂಡಿರುವ ಹರಿಪ್ರಸಾದ್, ‘ನಮ್ಮದು ಈಗ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು’ ಎಂದು ಅಭಿಮಾನದಿಂದ ಹೇಳುತ್ತಾರೆ. ರಾಷ್ಟ್ರೀಯ ಹೆದ್ದಾರಿ ಬದಿಯ ಕಟ್ಟೆಯಲ್ಲಿ ಕುಳಿತು ರಾಜಕೀಯ ಚರ್ಚೆಯಲ್ಲಿ ತೊಡಗಿದ್ದ ಸರ್ವಪಕ್ಷಗಳ ಮತ್ತು ಸರ್ವಧರ್ಮೀಯ ಆಟೊ ಚಾಲಕರು ಕೂಡ ‘ಮಂಜೇಶ್ವರದಲ್ಲಿ ಸ್ವಲ್ಪ ಫೈಟ್ ಇದೆ’ ಎಂದು ಹೇಳಿದರು.

ಹಿಂದಿನ ಎರಡು ಚುನಾವಣೆಗಳಲ್ಲಿ ಸ್ವಲ್ಪದರಲ್ಲೇ ಗೆಲುವು ಕೈತಪ್ಪಿದ ಬಿಜೆಪಿಗೆ ಮಂಜೇಶ್ವರದಲ್ಲಿ ಈ ಬಾರಿ ‘ಮಾಡು ಇಲ್ಲ ಮಡಿ’ ಸ್ಪರ್ಧೆ. 2016ರಲ್ಲಿ ಇಲ್ಲಿ 89 ಮತಗಳಿಂದ ಸೋತಿದ್ದ ಬಿಜೆಪಿ ಕಳೆದ ಬಾರಿ (2021) ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಕೆ. ಸುರೇಂದ್ರನ್ ಅವರನ್ನೇ ಕಣಕ್ಕೆ ಇಳಿಸಿತ್ತು. ಈ ಬಾರಿಯೂ ಅವರಿಗೇ ಟಿಕೆಟ್ ಕೊಟ್ಟಿದೆ. ಐಕ್ಯರಂಗದ ಅಶ್ರಫ್ ಅವರಿಗೆ ಆತಂಕ ಸೃಷ್ಟಿಸಿದ್ದ ಎಸ್ಡಿಪಿಐ ಅಭ್ಯರ್ಥಿ ಹಿಂದೆ ಸರಿದ ನಂತರ ಲೀಗ್ ‘ನಿರಾಳ’ವಾಗಿದೆ. ಸಿಪಿಎಂನ ಜಯಾನಂದನ್ ಕಣದಲ್ಲಿದ್ದಾರೆ. ಮಂಜೇಶ್ವರ ಕ್ಷೇತ್ರ ಆರಂಭದಲ್ಲಿ ಎಡರಂಗದ ಕೈಯಲ್ಲಿತ್ತು. ನಂತರ ಮುಸ್ಲಿಂ ಲೀಗ್ ಅಧಿಪತ್ಯ ಸ್ಥಾಪಿಸಿತು.

ಕಾಸರಗೋಡು ಕ್ಷೇತ್ರದಲ್ಲಿ ಮುಸ್ಲಿಂ ಲೀಗ್ ಒಳಗೊಂಡ ಐಕ್ಯರಂಗದ್ದೇ ಪ್ರಾಬಲ್ಯ. ಸತತ 11 ಬಾರಿ ಗೆಲುವು ಸಾಧಿಸಿರುವ ಐಕ್ಯರಂಗ ಈ ಬಾರಿ ಕಲ್ಲಟ್ರ ಮಾಹಿನ್ ಅವರನ್ನು ಕಣಕ್ಕೆ ಇಳಿಸಿದೆ. ಎನ್.ಎ ನೆಲ್ಲಿಕುನ್ನು ಕಣದಲ್ಲಿಲ್ಲ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಎನ್ಡಿಎ ಅಭ್ಯರ್ಥಿ. ಜಯದ ನಿರೀಕ್ಷೆ ಇಲ್ಲದ್ದರಿಂದ ಎಡರಂಗ ಸ್ವತಂತ್ರ ಅಭ್ಯರ್ಥಿ ಶಹನವಾಜ್ ಪಾಡೂರು ಅವರಿಗೆ ಬೆಂಬಲ ವ್ಯಕ್ತಪಡಿಸಿದೆ. ಈ ಬೆಳವಣಿಗೆ ಬಿಜೆಪಿಯಲ್ಲಿ ನಿರೀಕ್ಷೆ ಹುಟ್ಟಿಸಿದೆ. ‘ಮುಸ್ಲಿಂ ಮತಗಳ ವಿಭಜನೆ ಆಗುವುದು ಖಚಿತ. ಈ ಬಾರಿ ಬಿಜೆಪಿ ಗೆಲ್ಲದೇ ಇದ್ದರೆ ಇನ್ನೆಂದಿಗೂ ಜಯದ ನಿರೀಕ್ಷೆಯೇ ಬೇಡ’ ಎಂಬುದು ಆಟೊ ಚಾಲಕ ವಾಮನ ಕೊರಕ್ಕೋಡು ಅವರ ಮಾತು.

ಬೇಕಲ ಕೋಟೆಯಷ್ಟು ಗಟ್ಟಿ ಕ್ಷೇತ್ರ: ಬೇಕಲ ಕೋಟೆಯನ್ನು ಒಳಗೊಂಡ ಉದುಮ ಕ್ಷೇತ್ರದಲ್ಲಿ ದಶಕಗಳಿಂದ ಕೋಟೆ ಕಟ್ಟಿರುವ ಎಡರಂಗ ಈ ಬಾರಿ ಮತ್ತೊಮ್ಮೆ ಸಿ.ಕೆ ಕುಂಞಂಬು ಅವರನ್ನು ಕಣಕ್ಕೆ ಇಳಿಸಿದೆ. ಬಿಜೆಪಿಯ ಮನುಲಾಲ್ ಈ ಕೋಟೆಯನ್ನು ಒಡೆಯುವ ಪ್ರಯತ್ನಕ್ಕೆ ಇಳಿದಿದ್ದು, ನಿರೀಕ್ಷೆ ಇಲ್ಲದಿದ್ದರೂ ಐಕ್ಯರಂಗ ಕಾಂಗ್ರೆಸ್ನ ನೀಲಕಂಠನ್ ಅವರಿಗೆ ಟಿಕೆಟ್ ನೀಡಿದೆ. ಕಾಞಂಗಾಡ್ ಮತ್ತು ತೃಕ್ಕರಿಪುರದಲ್ಲೂ ಶತಾಯಗತಾಯ ಗೆಲ್ಲುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ.

ಗಡಿ ಕ್ಷೇತ್ರದಲ್ಲಿ ರಾಜ್ಯ ಮುಖಂಡರ ದಂಡು

ಮಂಜೇಶ್ವರ ಕ್ಷೇತ್ರ ಕರ್ನಾಟಕದ ರಾಜಕಾರಣಿಗಳು ಮತ್ತು ಸೈದ್ಧಾಂತಿಕ ಹೋರಾಟಗಾರರ ಪ್ರತಿಷ್ಠೆಯ ಕಣವಾಗಿಯೂ ಗಮನ ಸೆಳೆದಿದೆ. ಮಂಗಳೂರು ಭಾಗದವರು ನಿತ್ಯವೂ ಎಂಬಂತೆ ಮಂಜೇಶ್ವರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಮಾಜಿಕ ತಾಣಗಳಲ್ಲಂತೂ ಕನ್ನಡಿಗ–ತುಳುವರು ಕೇರಳ ವಿಧಾನಸಭೆ ಚುನಾವಣೆಯ ಕುರಿತು ನಡೆಸುತ್ತಿರುವ ಚರ್ಚೆಯಲ್ಲಿ ಮಂಜೇಶ್ವರ ಕ್ಷೇತ್ರಕ್ಕೆ ಆದ್ಯತೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲೆಯ ಶಾಸಕರು, ಮಂಗಳೂರಿನ ಶಾಸಕ ಭರತ್ ಶೆಟ್ಟಿ, ಮುಖಂಡ ನಳಿನ್ ಕುಮಾರ್ ಕಟೀಲ್ ಮುಂತಾದವರು ಈಗಾಗಲೇ ಪ್ರಚಾರ ಕೈಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಡಪಕ್ಷಗಳ ಮುಖಂಡರು ಕೂಡ ಕ್ಷೇತ್ರದ ಮೇಲೆ ನಿಗಾ ಇರಿಸಿದ್ದು ಬಿಜೆಪಿ ಪ್ರಚಾರದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಟೀಕಾ ಪ್ರಹಾರ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.