ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದುವೆಗೆ ಹಣ ಹೊಂದಿಸಲು ವಯನಾಡಿಗೆ ಬಂದಿದ್ದ ಯುವಕ ನಾಪತ್ತೆ: ಅಣ್ಣನ ಗೋಳಾಟ

Published 3 ಆಗಸ್ಟ್ 2024, 13:34 IST
Last Updated 3 ಆಗಸ್ಟ್ 2024, 13:34 IST
ಅಕ್ಷರ ಗಾತ್ರ

ವಯನಾಡ್(ಕೇರಳ): ವಯನಾಡ್ ಭೂಕುಸಿತದ ದುರಂತ ಕಥೆಗಳಲ್ಲಿ ಮಲಯಾಳಿಗಳ ಸಾವು ನೋವಿನ ಕಥೆ ಒಂದೆಡೆಯಾದರೆ ಉದ್ಯೋಗ ಅರಸಿ ವಯನಾಡಿಗೆ ಬಂದ ಹೊರರಾಜ್ಯದವರ ಕಥೆ ಇನ್ನೊಂದೆಡೆ‌. ಬಿಹಾರ ಮೂಲದ ರೆಂಜಿತ್ ಎಂಬ ಯುವಕ ಮದುವೆಗೆ ಮುನ್ನ ಹಣ ಹೊಂದಿಸಲು ಉದ್ಯೋಗ ಹುಡುಕಿಕೊಂಡು ವಯನಾಡಿಗೆ ಬಂದಿದ್ದರು. ದುರದೃಷ್ಟವಶಾತ್ ದುರಂತದಲ್ಲಿ ರೆಂಜಿತ್ ಕೂಡ ನಾಪತ್ತೆಯಾಗಿದ್ದಾರೆ. ಇದೇ ಅಕ್ಟೋಬರ್‌ನಲ್ಲಿ ಅವರ ವಿವಾಹ ನಿಗದಿಯಾಗಿತ್ತು.

ರೆಂಜಿತ್ ಅವರನ್ನು ಜೀವಂತವಾಗಿಯೇ ತವರಿಗೆ ಕರೆದುಕೊಂಡು ಹೋಗಬೇಕು ಎಂಬ ಆಸೆಗಣ್ಣಿನಲ್ಲಿರುವ ಅವರ ಸಹೋದರ ಸಂಬಂಧಿ ರವಿ ಕುಮಾರ್, ಇದೀಗ ವಯನಾಡಿಗೆ ಬಂದಿಳಿದಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರವಿ ಕುಮಾರ್, ‘ನನ್ನ ಸಹೋದರ ರೆಂಜಿತ್ ಸೇರಿ ಬಿಹಾರದ ಮೂಲದ ಆರು ಜನರು ದುರಂತ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಇವರಲ್ಲಿ ಇಬ್ಬರು ಆಪತ್ತಿನಿಂದ ಪಾರಾಗಿದ್ದು, ಒಬ್ಬ ಮಹಿಳೆಯ ಮೃತದೇಹ ಸಿಕ್ಕಿದೆ. ನನ್ನ ಸಹೋದರ(ರೆಂಜಿತ್) ಸೇರಿ ಮೂವರು ನಾಪತ್ತೆಯಾಗಿದ್ದಾರೆ’ ಎಂದು ಕಣ್ಣೀರು ಹಾಕಿದ್ದಾರೆ.

‘ಭಾರಿ ಮಳೆಯಾಗುತ್ತಿದ್ದರಿಂದ ವಯನಾಡಿಗೆ ಹೋಗಬೇಡ ಎಂದು ನಾನು ರೆಂಜಿತ್‌ಗೆ ಹೇಳಿದ್ದೆ’ ಎಂದರು.

‘ರೆಂಜಿತ್‌ಗೆ ಮದುವೆ ನಿಶ್ಚಯವಾಗಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮದುವೆ ನಡೆಯಬೇಕಿತ್ತು. ಮದುವೆಗೆ ಹಣ ಹೊಂದಿಸುವ ಉದ್ದೇಶದಿಂದ ಆತ ವಯನಾಡಿಗೆ ಬಂದಿದ್ದ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು’ ಎಂದು ಒದ್ದೆಗಣ್ಣಾದರು.

‘ರೆಂಜಿತ್‌ನನ್ನು ಪತ್ತೆ ಮಾಡುವುದಕ್ಕೆ ಸ್ಥಳೀಯರು ಮತ್ತು ಕೇರಳ ಸರ್ಕಾರದ ಸಹಾಯ ಕೋರಿದ್ದೇನೆ. ಅವರು ನನಗೆ ಊಟ ಕೊಟ್ಟಿದ್ದು, ತಂಗಲು ಜಾಗವನ್ನು ನೀಡಿದ್ದಾರೆ. ಆದರೆ ನಾಪತ್ತೆಯಾದ ನನ್ನ ತಮ್ಮನ ಸುಳಿವು ಸಿಕ್ಕಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT