ನವದೆಹಲಿ: ಸಿದ್ದರಾಮಯ್ಯ ಅವರಿಂದ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಮಾಜಿ ಸಚಿವ ಕೆ.ಜೆ. ಜಾರ್ಜ್ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯ ನಾಯಕತ್ವ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವಿನ ವಿಶ್ವಾಸಾರ್ಹ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಯಾವುದೇ ಗದ್ದಲವಿಲ್ಲದೇ ಸರಾಗವಾಗಿ ನಡೆದ ಅಧಿಕಾರ ಹಸ್ತಾಂತರವು ಅನೇಕರನ್ನು ಅಚ್ಚರಿಗೊಳಿಸಿತ್ತು. ಇದರ ಹಿಂದೆ, 6 ಬಾರಿಯ ಶಾಸಕ ಮತ್ತು ಸಿದ್ದರಾಮಯ್ಯ ಅವರ ಆಪ್ತ ಜಾರ್ಜ್, ಬಿಕ್ಕಟ್ಟು ನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ.

ಮೇ 26ರಂದು ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಚರ್ಚೆಗಾಗಿ ದೆಹಲಿಗೆ ಕರೆದಾಗ, ಅವರ ಜೊತೆ ಜಾರ್ಜ್ ತೆರಳಿದ್ದರು. ದಿನವಿಡೀ ನಡೆದ ಸಭೆಯ ನಂತರ, ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಈ ಸಂದರ್ಭ ಆಘಾತಕ್ಕೊಳಗಾದ ಸಿದ್ದರಾಮಯ್ಯ ನೇರ ದೆಹಲಿಯ ಸುಂದರ್ ನಗರ ಪ್ರದೇಶದಲ್ಲಿರುವ ಜಾರ್ಜ್ ನಿವಾಸಕ್ಕೆ ತೆರಳಿದ್ದರು. ಈ ಸಂದರ್ಭ ಜಾರ್ಜ್ ಅವರೇ ಸಿದ್ದರಾಮಯ್ಯನವರನ್ನು ಸಮಾಧಾನಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ, ಶಿವಕುಮಾರ್ ಅವರನ್ನು ದೆಹಲಿಯಲ್ಲಿಯೇ ಇರಲು ಸೂಚಿಸಿದ್ದ ಹೈಕಮಾಂಡ್, ಅವರ ಬೆಂಬಲಿಗರಿಗೆ ಸಾರ್ವಜನಿಕವಾಗಿ ಸಂಭ್ರಮಾಚರಣೆ ಮಾಡದಂತೆ ಸೂಚಿಸಿತ್ತು.

ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರದ ಸುದ್ದಿ ಹರಡುತ್ತಿದ್ದಂತೆ, ಅವರ ನಿಷ್ಠಾವಂತ ಸಚಿವರು ಮತ್ತು ಶಾಸಕರು ಅವರ ಪರ ಸಹಿ ಸಂಗ್ರಹ ಅಭಿಯಾನ ಆರಂಭಿಸಲು ಅಥವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಜಿ.ಪರಮೇಶ್ವರ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ. ಈ ಕುರಿತ ಸೂಚನೆ ಅರಿತ ಹೈಕಮಾಂಡ್, ಮುಖ್ಯಮಂತ್ರಿ ಮನವೊಲಿಸಿ ರಾಜೀನಾಮೆ ಕೊಡಿಸುವ ಮತ್ತು ಶಿವಕುಮಾರ್ ಅವರನ್ನು ಸಿಎಲ್ಪಿ ನಾಯಕರನ್ನಾಗಿ ಆಯ್ಕೆ ಮಾಡುವ ಸೂಕ್ಷ್ಮ ಕೆಲಸವನ್ನು ಜಾರ್ಜ್ಗೆ ವಹಿಸಿತ್ತು. ಜಾರ್ಜ್ ಇದನ್ನೆಲ್ಲ ಯಶಸ್ವಿಯಾಗಿ ನಿರ್ವಹಿಸಿದ್ದು, ಸಿದ್ದರಾಮಯ್ಯ ಮೇ 28ರಂದು ರಾಜೀನಾಮೆ ಸಲ್ಲಿಸಿದರು. ಮರುದಿನ, ಸಿದ್ದರಾಮಯ್ಯ ಮತ್ತು ಅವರ ಮಗ ಯತೀಂದ್ರ ಅವರನ್ನು ತಮ್ಮ ಖಾಸಗಿ ವಿಮಾನದಲ್ಲಿ ದೆಹಲಿಗೆ ಕರೆದೊಯ್ದ ಜಾರ್ಜ್ ರಾಹುಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಉನ್ನತ ನಾಯಕರೊಂದಿಗೆ ಸಭೆ ನಡೆಸಿದರು.

ಸಿದ್ದರಾಮಯ್ಯ–ರಾಹುಲ್ ಜೊತೆಗಿನ ಸಭೆಯಲ್ಲಿ ಜಾರ್ಜ್ ಸಹ ಹಾಜರಿದ್ದರು. ಪಕ್ಷದ ನಿರ್ದೇಶನವನ್ನು ಪಾಲಿಸಿದ್ದಕ್ಕಾಗಿ ಈ ವೇಳೆ ಸಿದ್ದರಾಮಯ್ಯ ಅವರನ್ನು ರಾಹುಲ್ ಪ್ರಶಂಸಿಸಿದರು. ಬಳಿಕ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ ನಡುವೆ ಉಪಹಾರ ಸಭೆಯನ್ನೂ ಜಾರ್ಜ್ ಏರ್ಪಡಿಸಿದ್ದರು.

ವಿವಿಧ ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸೋನಿಯಾ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಆಸ್ಕರ್ ಫರ್ನಾಂಡಿಸ್ ನಿಧನದ ನಂತರ ಉಂಟಾಗಿದ್ದ ನಿರ್ವಾತವನ್ನು ಜಾರ್ಜ್ ಪರಿಣಾಮಕಾರಿಯಾಗಿ ತುಂಬುತ್ತಿದ್ದಾರೆ ಎಂಬುದು ಪಕ್ಷದ ಒಳಗಿನ ಮಾತಾಗಿದೆ.

ಎಐಸಿಸಿ ಚುನಾವಣಾ ಸಮಿತಿಯ ಸದಸ್ಯರಾಗಿರುವ ಜಾರ್ಜ್, ಗಾಂಧಿ ಕುಟುಂಬದೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡಿದ್ದಾರೆ, ದೆಹಲಿಯಲ್ಲಿ ನಿವಾಸ ಹೊಂದಿರುವ ಅವರು, ಸಿದ್ದರಾಮಯ್ಯ ದೆಹಲಿ ಭೇಟಿ ನೀಡಿದ ಸಂದರ್ಭದಲ್ಲೆಲ್ಲ ಅವರ ಜೊತೆಗೆ ಭೇಟಿಕೊಟ್ಟಿದ್ದಾರೆ.

ಜಾರ್ಜ್ ಅವರ ಪ್ರಯತ್ನ ಸಿದ್ದರಾಮಯ್ಯ ಅವರಿಗೆ ಗೌರವಯುತ ನಿರ್ಗಮನ ಮತ್ತು ಶಿವಕುಮಾರ್ ಅವರಿಗೆ ಸುಗಮವಾಗಿ ಅಧಿಕಾರಕ್ಕೆ ಏರಲು ನೆರವಾಯಿತು. ರಾಜ್ಯ ಕಾಂಗ್ರೆಸ್ನಲ್ಲಿ ಏಕತೆಯನ್ನು ಕಾಪಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.