ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್‌ ಗಾಂಧಿ ದೊಡ್ಡ ಸುಳ್ಳುಗಾರ: ಬಿಜೆಪಿ ಟೀಕೆ

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಕುರಿತ ಹೇಳಿಕೆಗೆ ಕಿಡಿ
Published : 28 ಸೆಪ್ಟೆಂಬರ್ 2024, 16:09 IST
Last Updated : 28 ಸೆಪ್ಟೆಂಬರ್ 2024, 16:09 IST
ಫಾಲೋ ಮಾಡಿ
Comments

ನವದೆಹಲಿ: ‘ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದಿದ್ದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ‘ಹಾಡು–ಕುಣಿತ’ದ ಸಮಾರಂಭವಾಗಿತ್ತು’ ಎಂದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಶನಿವಾರ ಟೀಕಾಪ್ರಹಾರ ಮಾಡಿದೆ.

‘ರಾಹುಲ್‌ ಗಾಂಧಿ ದೊಡ್ಡ ಸುಳ್ಳುಗಾರ. ಈ ಹೇಳಿಕೆಯಿಂದ ಅವರ ಕುಟುಂಬದ ನಿಜ ಸ್ವರೂಪ ಹಾಗೂ ಹಿಂದೂ ಧರ್ಮ ಕುರಿತು ಹೊಂದಿರುವ ಅನಾದರ ತೋರಿಸುತ್ತದೆ’ ಎಂದು ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅಮಿತಾಭ್‌ ಬಚ್ಚನ್‌, ಅಂಬಾನಿ ಮತ್ತು ಅದಾನಿ ಅವರನ್ನು ಆಹ್ವಾನಿಸಲಾಗಿತ್ತು. ಬಡವರು, ಕಾರ್ಮಿಕರು ಅಥವಾ ರೈತರನ್ನು ಕರೆದಿರಲಿಲ್ಲ. ಅಂದು ಹಾಡು, ಕುಣಿತ ಇತ್ತು’ ಎಂಬ ರಾಹುಲ್‌ ಗಾಂಧಿ ಮಾತುಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ.

ಹರಿಯಾಣದ ಬರ್ವಾಲಾದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿಈ ಮಾತುಗಳನ್ನಾಡಿದ್ದ ರಾಹುಲ್‌, ‘ಇದೇ ಕಾರಣಕ್ಕೆ  ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿ ಪರಾಭವಗೊಂಡಿತು. ಸಮಾಜವಾದಿ ಪಕ್ಷದ ಅವಧೇಶ್‌ ಸಿಂಗ್‌ ಆಯ್ಕೆಯಾದರು’ ಎಂದೂ ಹೇಳಿದ್ದರು.

‘ರಾಮ ಮಂದಿರ ಕುರಿತು ಕಾಂಗ್ರೆಸ್‌ ಪಕ್ಷ ಪದೇಪದೇ ಅಗೌರವ ತೋರುತ್ತಿದೆ. ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಕಾರ್ಮಿಕರನ್ನು ಪ್ರಧಾನಿ ಸನ್ಮಾನಿಸಿದ್ದರು. ಅವರ ಮೇಲೆ ಹೂಮಳೆಗರೆದು ಅಭಿನಂದಿಸಿದ್ದರು’ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ.

‘ಸಂಸತ್‌ ಸದಸ್ಯರಾದ ನಂತರ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ರಾಹುಲ್‌ ಗಾಂಧಿ, ಈಗ ಧಾರ್ಮಿಕ ವಿಚಾರಗಳ ಕುರಿತು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ಧಾರೆ’ ಎಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಪ್ರಾಣ ಪ್ರತಿಷ್ಠಾಪನೆಯಂತಹ ವಿಚಾರ ಕುರಿತು ಮಾತನಾಡುವಾಗ ರಾಹುಲ್‌ ಗಾಂಧಿ ‘ಹಾಡು–ಕುಣಿತ’ ಎಂಬ ಪದಗಳನ್ನು ಬಳಸಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT