ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ ಲೋಕಸಭೆ ಸ್ಪೀಕರ್

Published 26 ಜುಲೈ 2023, 10:13 IST
Last Updated 26 ಜುಲೈ 2023, 10:13 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಿರೀಕ್ಷೆಯಂತೆ ಬುಧವಾರ ಪ್ರತಿಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ ಲೋಕಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಲು ಸ್ಪೀಕರ್‌ ಓಂ ಬಿರ್ಲಾ ಒಪ್ಪಿಗೆ ಸೂಚಿಸಿದ್ದಾರೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೋದಿ ಅವರು ಸಂಸತ್‌ನಲ್ಲಿ ಹೇಳಿಕೆ ನೀಡಬೇಕು. ಆ ಬಳಿಕವಷ್ಟೇ ಸುದೀರ್ಘ ಚರ್ಚೆಗೆ ಸಿದ್ಧವೆಂದು ವಿರೋಧ ಪಕ್ಷಗಳು ಬಿಗಿಪಟ್ಟು ಹಿಡಿದಿವೆ. ಇದರಿಂದ ಉಭಯ ಸದನಗಳಲ್ಲಿ ಸುಗಮ ಕಲಾಪಕ್ಕೆ ಅಡ್ಡಿಯಾಗಿದೆ.

ಕುಕಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಕೃತ್ಯದ ವಿಡಿಯೊ ಬಹಿರಂಗಗೊಂಡಿದ್ದ ವೇಳೆ ಸದನದ ಹೊರಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಅವರು, ಸಂಸತ್‌ನಲ್ಲಿ ಹೇಳಿಕೆ ನೀಡಿಲ್ಲ.

ಹಾಗಾಗಿ, ಮಣಿಪುರ ವಿಷಯದ ಬಗ್ಗೆ ಸದನದೊಳಗೆ ಅವರಿಂದ ಹೇಳಿಕೆ ಪಡೆಯಲು ವಿರೋಧ ಪಕ್ಷಗಳು, ಈ ಅಸ್ತ್ರ ಪ್ರಯೋಗಿಸಿವೆ. ನಿಯಮದ ಅನ್ವಯ ಸ್ಪೀಕರ್‌ ಅವರು ಸದನದ ಎಲ್ಲಾ ನಾಯಕರ ಜೊತೆಗೆ ಸಮಾಲೋಚನೆ ನಡೆಸಿ, 10 ದಿನದೊಳಗೆ ಈ ಕುರಿತ ಚರ್ಚೆಗೆ ದಿನಾಂಕ ನಿಗದಿಪಡಿಸಬೇಕಿದೆ.

ಮಣಿಪುರ ಸಂಘರ್ಷದ ಬಗ್ಗೆ ಸಂಸತ್‌ನಲ್ಲಿ ಹೇಳಿಕೆ ನೀಡಿದರೆ ತಮ್ಮ ಆತ್ಮಗೌರವಕ್ಕೆ ಚ್ಯುತಿಯಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಭಾವಿಸಿರುವುದು ಶೋಚನೀಯ
ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷ, ಎಐಸಿಸಿ

ಸದನದಲ್ಲಿ ನಡೆದಿದ್ದೇನು?: ಬೆಳಿಗ್ಗೆ 9.20ಗಂಟೆಗೆ ಕಾಂಗ್ರೆಸ್‌ನ ಉಪ ನಾಯಕ ಗೌರವ್‌ ಗೊಗೊಯ್‌ ಅವರು, ‘ಇಂಡಿಯಾ’ ಪರವಾಗಿ ಸ್ಪೀಕರ್‌ಗೆ ಅವಿಶ್ವಾಸ ನಿರ್ಣಯ ಕುರಿತ ನೋಟಿಸ್ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಗೆ ಮತ್ತೆ ಕಲಾಪ ಶುರುವಾದಾಗ ಈ ಬಗ್ಗೆ ಬಿರ್ಲಾ ಅವರು, ‘ನಿಯಮ 198ರ ಅಡಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ’ ಎಂದು ಲೋಕಸಭೆಯಲ್ಲಿ ಪ್ರಕಟಿಸಿದರು. ಎನ್‌ಡಿಎ ಹಾಗೂ ‘ಇಂಡಿಯಾ’ ಸೇರದೆ ತಟಸ್ಥವಾಗಿರುವ ಬಿಆರ್‌ಎಸ್‌ ಕೂಡ ಅವಿಶ್ವಾಸ ನಿರ್ಣಯ ಮಂಡಿಸಿದೆ. ಆ ಪಕ್ಷದ ಸಂಸದ ನಾಮ ನಾಗೇಶ್ವರ ರಾವ್ ಅವರು, ನೋಟಿಸ್‌ ಸಲ್ಲಿಸಿದ್ದಾರೆ. ಆದರೆ, ಇದನ್ನು ಸ್ಪೀಕರ್‌ ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಆರ್‌ಎಸ್‌ ನಿರ್ಣಯಕ್ಕೆ ಎಐಎಂಐಎಂ ಬೆಂಬಲ ಘೋಷಿಸಿದೆ. 

ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು 2018ರಲ್ಲಿ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯದ ಸವಾಲು ಎದುರಿಸಿತ್ತು. ಆದರೆ, ಸಂಖ್ಯಾಬಲ ಇದ್ದ ಕಾರಣ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗಿರಲಿಲ್ಲ.

ಸಂಖ್ಯಾಬಲ ಎಷ್ಟು?

ಎನ್‌ಡಿಎಯಿಂದ ವೈಆರ್‌ಎಸ್‌ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಆದರೂ, ಮೋದಿ ಸರ್ಕಾರ ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ ಅದರ ರಕ್ಷಣೆಗೆ ನಿಂತಿದೆ.

ಈ ನಡುವೆಯೇ ‘ಇಂಡಿಯಾ’ದ ಅವಿಶ್ವಾಸ ನಿರ್ಣಯದ ನಡೆಗೆ ಯಾವುದೇ ಅರ್ಥವಿಲ್ಲ ಎಂದು ಆ ಪಕ್ಷದ ರಾಜ್ಯಸಭೆಯ ನಾಯಕ ವಿ. ವಿಜಯಸಾಯಿ ರೆಡ್ಡಿ ಹೇಳಿದ್ದಾರೆ. ಇದರಿಂದ ಆ ಪಕ್ಷದ ಸದಸ್ಯರು, ನಿರ್ಣಯದ ವಿರುದ್ಧ ಮತ ಚಲಾಯಿಸುವ ಸಾಧ್ಯತೆಯಿದೆ. ಹಾಗಾಗಿ, ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರ ಬಲ 357 ಆಗುವ ಸಾಧ್ಯತೆ ಇದೆ.

ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ 543. ಬಹುಮತಕ್ಕೆ 272 ಸದಸ್ಯರ ಬೆಂಬಲ ಬೇಕಿದೆ. ‘ಇಂಡಿಯಾ’ದ ಸದಸ್ಯರ ಬಲ 154 ಇದೆ. ಉಳಿದಂತೆ ಬಿಜೆಡಿ 12, ಅಕಾಲಿದಳ 2 ಹಾಗೂ ಜೆಡಿಎಸ್‌ನ ಒಬ್ಬರು ಸದಸ್ಯ ಇದ್ದಾರೆ.

ದೇಶದ ಜನರಿಗೆ ಮೋದಿ ಮತ್ತು ಬಿಜೆಪಿ ಮೇಲೆ ಅಪಾರ ನಂಬಿಕೆ ಇದೆ. ಪ್ರತಿಪಕ್ಷಗಳಿಗೆ ಹಿಂದಿನ ಬಾರಿಯೂ ಪಾಠ ಕಲಿಸಿದ್ದಾರೆ. ಮತ್ತೆ ಅದೇ ಪುನರಾವರ್ತನೆಯಾಗಲಿದೆ..
ಪ್ರಲ್ಹಾದ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

ಏಕಪಕ್ಷೀಯ ‘ಕೈ’ ನಡೆಗೆ ಅಪಸ್ವರ?

ಅವಿಶ್ವಾಸ ನಿರ್ಣಯ ಮಂಡನೆ ಸಂಬಂಧ ಕಾಂಗ್ರೆಸ್‌ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದೆ ಎಂದು ‘ಇಂಡಿಯಾ’ದಲ್ಲಿನ ಕೆಲವು ಪಕ್ಷಗಳ ನಾಯಕರು ಅಪಸ್ವರ ಎತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಪಕ್ಷಗಳ ನಾಯಕರಿಗೆ ಆಹ್ವಾನ ನೀಡಿರಲಿಲ್ಲ. ಇದು ಅವರಲ್ಲಿ ಅತೃಪ್ತಿಗೆ ಕಾರಣವಾಗಿದೆ ಎನ್ನಲಾಗಿದೆ.

ನಿರ್ಣಯ ಮಂಡನೆಗೂ ಮೊದಲು ಸಭೆ ನಡೆಸಿ ನಮ್ಮೊಟ್ಟಿಗೆ ಸಮಾಲೋಚನೆ ನಡೆಸಿಲ್ಲ ಎಂಬ ಅಸಮಾಧಾನ ಅವರಲ್ಲಿದೆ. ಆದರೆ, ಮೋದಿ ಸರ್ಕಾರದ ವಿರುದ್ಧ ಸಂಘಟಿತ ಹೋರಾಟದ ಭಾಗವಾಗಿ ನಿರ್ಣಯವನ್ನು ಬೆಂಬಲಿಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

‘ಅವಿಶ್ವಾಸ ನಿರ್ಣಯ ಮಂಡನೆಗೆ ಸಲ್ಲಿಸಿರುವ ನೋಟಿಸ್‌ನಲ್ಲಿ ಎಲ್ಲಾ ಪಕ್ಷಗಳ ಸಂಸದರ ಸಹಿಗೂ ಅವಕಾಶ ಕಲ್ಪಿಸಬೇಕಿತ್ತು. ಇದು ‘ಇಂಡಿಯಾ’ ಒಗ್ಗಟ್ಟಿಗೆ ಮತ್ತಷ್ಟು ಬಲ ತುಂಬುತ್ತಿತ್ತು’ ಎಂದು ವಿರೋಧ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

‘ಸಂವಹನ ಕೊರತೆಯಿಂದ ಈ ಗೊಂದಲ ಸೃಷ್ಟಿಯಾಗಿದೆ. ಮುಂದೆ ಈಗಾಗದಂತೆ ಎಚ್ಚರವಹಿಸಲಾಗುವುದು’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಮಣಿಪುರ ಸಂಘರ್ಷದ ಬಗ್ಗೆ ಸಂಸತ್‌ನಲ್ಲಿ ಹೇಳಿಕೆ ನೀಡಿದರೆ ತಮ್ಮ ಆತ್ಮಗೌರವಕ್ಕೆ ಚ್ಯುತಿಯಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಭಾವಿಸಿರುವುದು ಶೋಚನೀಯ.ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ

ಸಂಖ್ಯಾಬಲ

ಎನ್‌ಡಿಎಯಿಂದ ವೈಎಸ್‌ಆರ್‌ ಕಾಂಗ್ರೆಸ್‌ ಅಂತರ ಕಾಯ್ದುಕೊಂ ಡಿದೆ. ಆದರೂ, ಮೋದಿ ಸರ್ಕಾರ ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿದಾಗ
ಲೆಲ್ಲಾ ಅದರ ರಕ್ಷಣೆಗೆ ನಿಂತಿದೆ.

‘ಇಂಡಿಯಾ’ದ ನಡೆಗೆ ಅರ್ಥವಿಲ್ಲ ಎಂದು ಆ ಪಕ್ಷದ ರಾಜ್ಯಸಭೆಯ ನಾಯಕ ವಿ. ವಿಜಯಸಾಯಿ ರೆಡ್ಡಿ ಹೇಳಿದ್ದಾರೆ. ಇದರಿಂದ ಆ ಪಕ್ಷದ ಸದಸ್ಯರು, ನಿರ್ಣಯದ ವಿರುದ್ಧ ಮತ ಚಲಾಯಿ ಸುವ ಸಾಧ್ಯತೆಯಿದೆ. ಹಾಗಾಗಿ, ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರ ಬಲ 357 ಆಗುವ ಸಾಧ್ಯತೆ ಇದೆ. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ 543. ಬಹುಮತಕ್ಕೆ 272 ಸದಸ್ಯರ ಬೆಂಬಲ ಬೇಕಿದೆ. ‘ಇಂಡಿಯಾ’ದ ಸದಸ್ಯರ ಬಲ 154 ಇದೆ. ಉಳಿದಂತೆ ಬಿಜೆಡಿ 12, ಬಿಎಸ್ಪಿ 9 ಅಕಾಲಿದಳ 2, ಜೆಡಿಎಸ್‌ನ ಒಬ್ಬರು ಸದಸ್ಯ ಇದ್ದಾರೆ. ವಿವಿಧ ಕಾರಣದಿಂದ ಉಳಿದ ಸ್ಥಾನಗಳು ಖಾಲಿ ಇವೆ.

ಭವಿಷ್ಯ ನುಡಿದಿದ್ದ ಮೋದಿ
ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತಂತೆ ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ಮೋದಿ ನುಡಿದಿದ್ದ ‘ಭವಿಷ್ಯ’ ನಿಜವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 2019ರ ಫೆಬ್ರುವರಿಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮೋದಿ, ‘ಮತ್ತೆ 2023ರಲ್ಲಿಯೂ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಜ್ಜಾಗಿ’ ಎಂದು ವ್ಯಂಗ್ಯವಾಡಿದರು. ‘2014ರ ಲೋಕಸಭೆ ಚುನಾವಣೆಗೂ ಮೊದಲು ಯುಪಿಎ ಬಲ ಹೆಚ್ಚಿತ್ತು. ಅಹಂಕಾರದಿಂದಾಗಿ ಕಾಂಗ್ರೆಸ್‌ ಬಲಾಬಲ 40ಕ್ಕೆ ಕುಸಿಯಿತು. ಆರಂಭದಲ್ಲಿ ಎರಡು ಸ್ಥಾನಗಳಲ್ಲಿದ್ದ ನಾವು ಈಗ ಅಧಿಕಾರದ ಗದ್ದುಗೆಯಲ್ಲಿ ಕುಳಿತಿದ್ದೇವೆ’ ಎಂದು ಜರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT