ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Madhya Pradesh Election | ದತಿಯಾ ಕ್ಷೇತ್ರ: ಮಿಶ್ರಾ ಮುಂದಿದೆ ಕಠಿಣ ಹಾದಿ

Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ಅಕ್ಷರ ಗಾತ್ರ

ದತಿಯಾ (ಮಧ್ಯಪ್ರದೇಶ): ದತಿಯಾ ಕ್ಷೇತ್ರದ ಹಳ್ಳಿಯೊಂದರಲ್ಲಿ ‘ಜೈ ಶ್ರೀರಾಮ್‌’, ‘ದೇಶಕ್ಕಾಗಿ ಬಿಜೆಪಿಗೆ ಮತ ನೀಡಿ’ ಎಂದು ಘೋಷಣೆ ಕೂಗುತ್ತಾ ದೊಡ್ಡ ಗುಂಪೊಂದು ಸಾಗುತ್ತಿತ್ತು. ಕಮಲ ಪಕ್ಷದ ಅಭ್ಯರ್ಥಿ ಹಸನ್ಮುಖರಾಗಿ ಜನರೊಂದಿಗೆ ಆತ್ಮೀಯರಾಗಿ ಬೆರೆಯುತ್ತಾ ಮುಂದೆ ಸಾಗುತ್ತಿದ್ದರು. ಸಮೀಪದಲ್ಲಿ ಟೀ ಮಾರುತ್ತಿದ್ದ 40 ವರ್ಷದ ರಾಹುಲ್‌ ಯಾದವ್‌ ಬಳಿ ‘ಅಭ್ಯರ್ಥಿ ಯಾರು’ ಎಂದು ಪ್ರಶ್ನಿಸಿದೆ. ನನ್ನತ್ತ ವಿಚಿತ್ರವಾಗಿ ನೋಡಿದ ಅವರು, ‘ನೀವು ಬೇರೆ ರಾಜ್ಯದವರಾ? ಅವರು ನಮ್ಮ ಗೃಹ ಸಚಿವರು. ನರೋತ್ತಮ ಮಿಶ್ರಾ. ಅವರ ಬಗ್ಗೆಯೂ ನಿಮಗೆ ಗೊತ್ತಿಲ್ಲವೇ’ ಎಂದು ಮರು ಪ್ರಶ್ನೆ ಹಾಕಿದರು. ನಾನು ಸುಮ್ಮನೆ ನಕ್ಕೆ. ‘ಹಾಗಾದರೆ ಅವರು ಸುಲಭದಲ್ಲಿ ಗೆಲ್ಲಬಹುದಲ್ಲ’ ಎಂದು ಟೀ ಅಂಗಡಿ ಮಾಲೀಕನನ್ನು ಕೆಣಕಿದೆ. ಆಗ ದುರುಗುಟ್ಟಿ ನೋಡಿದ ಯಾದವ್‌, ‘ಮಿಶ್ರಾ ಅವರು ಮೂಲತಃ ದಬ್ರಾ ಕ್ಷೇತ್ರದವರು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾದಾಗ ಇಲ್ಲಿಗೆ ಓಡಿ ಬಂದರು. ನಂತರ ಗೆಲ್ಲುತ್ತಲೇ ಬಂದರು. ಕಳೆದ ಚುನಾವಣೆಯಲ್ಲಿ ಗೆದ್ದಿದ್ದು 2 ಸಾವಿರ ಮತಗಳ ಅಂತರದಿಂದ. ಇವರನ್ನೇ ಎಷ್ಟು ಸಲ ಗೆಲ್ಲಿಸುವುದು. ನಮಗೂ ಬದಲಾವಣೆ ಬೇಕಲ್ಲ’ ಎಂದು ಮಾರ್ಮಿಕವಾಗಿ ನುಡಿದರು. ‘ಹಾಗಿದ್ದರೆ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲವೇ’ ಎಂದು ಕೇಳಿದೆ. ‘ಕ್ಷೇತ್ರದಲ್ಲಿ ಭಾರಿ ಅಭಿವೃದ್ಧಿ ಕಾರ್ಯಗಳು ಆಗಿವೆ. ಹತ್ತಾರು ದೇವಸ್ಥಾನಗಳು ಪುನರುಜ್ಜೀವನಗೊಂಡಿವೆ. ಹಾಗೆಯೇ, ಕೆಲಸ ಮಾಡಿಸದೆಯೇ ಬಿಲ್ ಮಾಡಿರುವ ಉದಾಹರಣೆಗಳು ಉಂಟು’ ಎಂದು ಸೇರಿಸಿದರು. 

ಗ್ವಾಲಿಯರ್‌ನಿಂದ ಸರಿಸುಮಾರು 76 ಕಿ.ಮೀ. ದೂರದಲ್ಲಿರುವ ದತಿಯಾ ಕ್ಷೇತ್ರದಲ್ಲಿ ಚುನಾವಣೆ ರಂಗೇರಿದೆ. ಈ ಕಣವು ದೇಶದ ಗಮನ ಸೆಳೆದಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಆಗಿರುವ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ಬಿಜೆಪಿ ಹುರಿಯಾಳು. ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಜಯ ಗಳಿಸಿರುವ ಮಿಶ್ರಾ ಅವರಿಗೆ ಈ ಸಲ ಗೆಲುವು ಸುಲಭವಲ್ಲ. ಮಿಶ್ರಾ ವಿರುದ್ಧ ‘ಹ್ಯಾಟ್ರಿಕ್‌’ ಸೋಲು ಕಂಡಿರುವ ಹಿರೀಕ ರಾಜೇಂದ್ರ ‘ಕೈ’ ಅಭ್ಯರ್ಥಿ. ಅವರು ಎರಡು ಬಾರಿ ಶಾಸಕರಾಗಿದ್ದರು. ಅವರ ಬೆನ್ನಿಗೆ ಅವಧೇಶ್‌ ನಾಯಕ್‌ ನಿಂತಿದ್ದಾರೆ. ಕಾಂಗ್ರೆಸ್‌ ಪಕ್ಷವು ಆರಂಭದಲ್ಲಿ ಅವಧೇಶ್‌ ನಾಯಕ್‌ ಅವರಿಗೆ ಟಿಕೆಟ್ ಕೊಟ್ಟಿತ್ತು. ಕಳೆದ ಸಲ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಯನ್ನು ಕೈಬಿಟ್ಟು ಕೆಲವೇ ತಿಂಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಯಾದ ನಾಯಕ್‌ ಅವರಿಗೆ ಮಣೆ ಹಾಕಿದ್ದಕ್ಕೆ ಪಕ್ಷದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದ್ದರು. ಬಳಿಕ ಕಾಂಗ್ರೆಸ್‌ ಪಕ್ಷವು ಅಭ್ಯರ್ಥಿಯನ್ನು ಬದಲಿಸಿತ್ತು. ಈಗ ನಾಯಕ್‌ ಹಾಗೂ ಭಾರ್ತಿ ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದಾರೆ.

ನಾಯಕ್ ಅವರು ಮೂಲತಃ ರಾಷ್ಟ್ರೀಯ ಸ್ವಯಂಸೇವಕ ಸಂಘದವರು. ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರ ನೆಚ್ಚಿನ ಶಿಷ್ಯ. ಕಳೆದ ಎರಡು ಚುನಾವಣೆಗಳಲ್ಲಿ ಮಿಶ್ರಾ ಹಿಂದೆ ನಿಂತು ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದರು. 2018ರ ಚುನಾವಣೆಯಲ್ಲಿ ಗೆದ್ದ ನಂತರ ಮಿಶ್ರಾ ಅವಮಾನ ಮಾಡಿದ್ದಾರೆ ಎಂಬುದು ನಾಯಕ್‌ ಕೋಪಕ್ಕೆ ಕಾರಣ. ನಂತರ ಮಿಶ್ರಾ ಅವರಿಂದ ದೂರವಾದರು. 

ಕ್ಷೇತ್ರದಲ್ಲಿ ಬ್ರಾಹ್ಮಣ ಹಾಗೂ ಕುಶ್ವಾಹ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಬ್ರಾಹ್ಮಣ ಮತದಾರರ ಸಂಖ್ಯೆ 30 ಸಾವಿರದಷ್ಟು ಇದೆ. ಕೈ ಹಾಗೂ ಕಮಲ ಪಾಳಯದ ಅಭ್ಯರ್ಥಿಗಳಿಬ್ಬರೂ ಬ್ರಾಹ್ಮಣ ಸಮುದಾಯದವರು. ಚುನಾವಣೆ ಘೋಷಣೆಯಾದ ಬಳಿಕ ಕೈ ಪಾಳಯದ ಹಲವು ನಾಯಕರನ್ನು ಬಿಜೆಪಿ ಸೆಳೆದುಕೊಂಡಿದೆ. 1993ರ ಬಳಿಕ ಕಾಂಗ್ರೆಸ್‌ ಇಲ್ಲಿ ಗೆದ್ದೇ ಇಲ್ಲ. ಹಿಂದು ಮತಗಳ ಮೇಲೆ ಕಣ್ಣಿಟ್ಟು ಮಿಶ್ರಾ ಅವರು ರಾಮ್‌ ಲಾಲಾ ಲೋಕ್‌ ಹಾಗೂ ದತಿಯಾದ ಪಿತಾಂಬರ ಮಂದಿರದ ಅಭಿವೃದ್ಧಿಗೆ ಅನುದಾನ ಕೊಡಿಸಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಮತದಾರರು ಹೇಳುತ್ತಾರೆ. ಕೆಲವೊಂದು ಮತದಾರರು ‘ಈ ಸಲ ಬದಲಾವಣೆಗಾಗಿ ಮತ ಚಲಾಯಿಸುತ್ತೇವೆ’ ಎಂದೂ ತಿಳಿಸುತ್ತಾರೆ.   

ಮಾತಿಗೆ ಸಿಕ್ಕ ಅಂಗನವಾಡಿ ಕಾರ್ಯಕರ್ತೆ ಪ್ರಿಯಾಂಕಾ ಚೌರಾಸಿಯಾ, ‘ನಮಗೆ ಇಲ್ಲಿ ಅಭ್ಯರ್ಥಿ ಮುಖ್ಯವಲ್ಲ. ಪಕ್ಷ ಮುಖ್ಯ. ಮಹಿಳೆಯರ ಶ್ರೇಯೋಭಿವೃದ್ಧಿಗೆ ಬಿಜೆಪಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಲಾಡ್ಲಿ ಬೆಹ್ನಾ ಯೋಜನೆಯಡಿ ಮಹಿಳೆಯರಿಗೆ ₹1,250 ಕೊಡುತ್ತಿರುವುದು ಉತ್ತಮ ಉಪಕ್ರಮ. ನಮಗೆ ಅದು ದೊಡ್ಡ ಮೊತ್ತ. ಅದನ್ನು ನೆನಪಿನಲ್ಲಿಟ್ಟುಕೊಂಡು ಮತ ಚಲಾಯಿಸುತ್ತೇವೆ’ ಎಂದು ಹೇಳುತ್ತಾರೆ. 

ಅವರ ಜತೆಗಿದ್ದ ಸುನಿತಾ ಕಾತ್ರೆ ಅವರು ‘ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ’ ಎಂದು ಹೇಳಿಕೊಂಡರು. ‘ಶಾಸಕರ ಬೆಂಬಲಿಗರ ದೌರ್ಜನ್ಯ ಮಿತಿಮೀರಿದೆ. ವರ್ಷದ ಹಿಂದೆ ಪ್ರಬಲ ಸಮುದಾಯದ ವ್ಯಕ್ತಿಯೊಬ್ಬರು ತಳ ಸಮುದಾಯದ ವ್ಯಕ್ತಿಯನ್ನು ಕೊಲೆ ಮಾಡಿದರು. ಆದರೆ, ಅವರು ಜೈಲಿನಿಂದ ಒಂದೇ ದಿನದಲ್ಲಿ ಬಿಡುಗಡೆಯಾದರು. ಗೃಹ ಸಚಿವರ ಬೆಂಬಲವಿಲ್ಲದೆ ಅವರು ಬಿಡುಗಡೆಯಾಗಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ. 

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ಉಮೇಶ್‌ ಕುಶ್ವಾಹ, ‘ಮಿಶ್ರಾ ಅಭಿವೃದ್ಧಿ ಕಾರ್ಯ ಮಾಡಿರುವುದು ನಿಜ. ಅವರದ್ದು ಹರಕು ಬಾಯಿ. ಅದೇ ಕಾರಣಕ್ಕೆ ಅವರನ್ನು ಸೋಲಿಸಲು ಎಲ್ಲರೂ ಒಗ್ಗಟ್ಟಾಗಿ ಹತಾರ ಹಿಡಿದುಕೊಂಡು ನಿಂತಿದ್ದಾರೆ. ಯಾರೇ ಗೆದ್ದರೂ ಒಂದೆರಡು ಸಾವಿರ ಮತಗಳ ಅಂತರದಿಂದ ಅಷ್ಟೇ’ ಎನ್ನುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT