ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನನಷ್ಟ ಪ್ರಕರಣ: ಖುದ್ದು ಹಾಜರಾತಿಯಿಂದ ರಾಹುಲ್‌ಗೆ ಕಾಯಂ ವಿನಾಯಿತಿ

ಠಾಣೆ ನ್ಯಾಯಾಲಯದ ಆದೇಶ
Last Updated 15 ಏಪ್ರಿಲ್ 2023, 17:04 IST
ಅಕ್ಷರ ಗಾತ್ರ

ಠಾಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪದಾಧಿಕಾರಿಯೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಖುದ್ದು ಹಾಜರಾತಿಯಿಂದ ಠಾಣೆಯ ಜಿಲ್ಲಾ ನ್ಯಾಯಾಲಯವು ಕಾಯಂ ವಿನಾಯಿತಿ ನೀಡಿದೆ.

ರಾಹುಲ್ ಗಾಂಧಿ ಪರ ವಕೀಲ ನಾರಾಯಣ್ ಅಯ್ಯರ್ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ಭಿವಂಡಿ ಪ್ರಥಮದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಲಕ್ಷ್ಮೀಕಾಂತ್ ಸಿ. ವಾಡಿಕರ್ ಅವರು, ರಾಹುಲ್ ಕಾಯಂ ವಿನಾಯಿತಿಗೆ ಅರ್ಹರು ಎಂಬುದನ್ನು ಗಮನಿಸಿ, ಕೆಲವು ಷರತ್ತುಗಳನ್ನು ವಿಧಿಸಿ ಆದೇಶ ನೀಡಿದ್ದಾರೆ.

ಸ್ಥಳೀಯ ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಸಾಕ್ಷ್ಯವನ್ನು ದಾಖಲಿಸಲು ಮ್ಯಾಜಿಸ್ಟ್ರೇಟ್ ಜೂನ್ 3ನೇ ತಾರೀಖನ್ನು ನಿಗದಿಪಡಿಸಿದ್ದಾರೆ.

‘ಭಾಷಣವೊಂದರಲ್ಲಿ ರಾಹುಲ್ ಗಾಂಧಿ ಅವರು, ಮಹಾತ್ಮ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಆರ್‌ಎಸ್ಎಸ್ ವಿರುದ್ಧ ಆರೋಪಿಸಿ ಮಾತನಾಡಿದ್ದಾರೆ. ಈ ಭಾಷಣದಿಂದಾಗಿ ಆರ್‌ಎಸ್‌ಎಸ್‌ನ ಪ್ರತಿಷ್ಠೆಗೆ ಕುಂದುಂಟಾಗಿದೆ’ ಎಂದು ಆರೋಪಿಸಿ ಅರ್ಜಿದಾರರಾದ ರಾಜೇಶ್ ಕುಂಟೆ ಅವರು, 2014ರಲ್ಲಿ ಭಿವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು.

ಈ ದೂರಿಗೆ ಸಂಬಂಧಿಸಿದಂತೆ 2018ರ ಜೂನ್‌ನಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದ ರಾಹುಲ್ ಗಾಂಧಿ, ಈ ಪ್ರಕರಣದಲ್ಲಿ ತಾವು ನಿರಪರಾಧಿ ಎಂದು ಹೇಳಿದ್ದರು.

ದೆಹಲಿ ನಿವಾಸಿ ಹಾಗೂ ಲೋಕಸಭಾ ಸದಸ್ಯ ಎನ್ನುವ ಕಾರಣ ನೀಡಿ ಭಿವಂಡಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ರಾಹುಲ್ ಗಾಂಧಿ ಅವರು ವಿನಾಯಿತಿ ಕೋರಿದ್ದರು. ಅಗತ್ಯವಿದ್ದಾಗ ತಮ್ಮ ಪರವಾಗಿ ವಕೀಲರು ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಅವರು ಮನವಿ ಮಾಡಿದ್ದರು.

ರಾಹುಲ್ ಈಗ ಸಂಸದರಲ್ಲ. ಹಾಗಾಗಿ, ಅವರ ಖುದ್ದು ಹಾಜರಾತಿಗೆ ನ್ಯಾಯಾಲಯವು ವಿನಾಯಿತಿ ನೀಡಬಾರದು ಎಂದು ರಾಜೇಶ್ ಕುಂಟೆ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT