ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ‘ಮಹಾಯುತಿ’ ಹಾಗೂ ವಿರೋಧ ಪಕ್ಷ ‘ಮಹಾ ವಿಕಾಸ್ ಆಘಾಡಿ’ (ಇಂಡಿಯಾ ಒಕ್ಕೂಟ) ಬಿರುಸಿನ ಸಿದ್ಧತೆ ನಡೆಸಿರುವಂತೆಯೇ, ಆರು ಸಣ್ಣ ಪುಟ್ಟ ಪಕ್ಷಗಳು ಪ್ರಬಲ ಪೈಪೋಟಿ ನೀಡಲು ಮುಂದಾಗಿವೆ.
288 ಶಾಸಕರನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಗೆ ಇದೇ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಎರಡು ಮೈತ್ರಿಗೆ ವಿರುದ್ಧವಾಗಿ ‘ತೃತೀಯ ರಂಗ’ವನ್ನು ರಚಿಸುವ ಯತ್ನಗಳು ನಡೆಯುತ್ತಿದ್ದು, ಎರಡು ಮೈತ್ರಿಕೂಟಗಳಿಗೆ ಸವಾಲು ಎದುರಾಗಿದೆ.
ಏಕನಾಥ ಶಿಂಧೆ ನೇತೃತ್ವದ ಶಿವಸೇನಾ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಹಾಗೂ ದೇವೇಂದ್ರ ಫಡಣವೀಸ್ ನೇತೃತ್ವದಲ್ಲಿ ಬಿಜೆಪಿ ಸೇರಿಕೊಂಡು ‘ಮಹಾಯುತಿ’ ರಚನೆಯಾಗಿದ್ದು, ಮತ್ತೆ ಗೆಲ್ಲುವ ಉತ್ಸಾಹದಲ್ಲಿದೆ. ಉದ್ಧವ್ ಠಾಕ್ರೆಯ ಶಿವಸೇನಾ (ಯುಬಿಟಿ) ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ), ಕಾಂಗ್ರೆಸ್ ಸೇರಿ ‘ಮಹಾ ವಿಕಾಸ್ ಆಘಾಡಿ’ ಚುನಾವಣೆಗೆ ಭರದ ಸಿದ್ಧತೆ ನಡೆಸಿದೆ. ಎರಡು ಮೈತ್ರಿಕೂಟವು ‘ಮರಾಠ ಮೀಸಲಾತಿ’ ‘ಹಿಂದುಳಿದ ವರ್ಗಗಳ ಮೀಸಲಾತಿ’ ವಿಚಾರದಲ್ಲಿ ಅತೀ ದೊಡ್ಡ ಸವಾಲು ಎದುರಿಸುತ್ತಿದೆ.
ಇದಲ್ಲದೇ, ಪ್ರಕಾಶ್ ಅಂಬೇಡ್ಕರ್ ನೇತೃತ್ವದಲ್ಲಿ ‘ವಂಚಿತ್ ಬಹುಜನ್ ಆಘಾಡಿ’(ವಿಬಿಎ), ರಾಜ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರ ನವನಿರ್ಮಾಣ್ ಸೇನಾ(ಎಂಎನ್‌ಎಸ್), ಅಸಾದುದ್ದೀನ್ ಓವೈಸಿಯ ಆಲ್ ಇಂಡಿಯಾ ಮಜ್ಲಿಸ್–ಇ–ಇತ್ತೆಹುದುಲ್ ಮುಸ್ಲಿಮೀನ್ (ಎಐಎಂಐಎಂ), ಬಚ್ಚು ಕಡು ನೇತೃತ್ವದ ‘ಪ್ರಹಾರ್ ಜನಶಕ್ತಿ’, ರಾಜು ಶೆಟ್ಟಿ ನೇತೃತ್ವದ ‘ಸ್ವಾಭಿಮಾನಿ ಶೇತ್ಕರಿ ಸಂಘಟನೆ’ ಹಾಗೂ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ನೇತೃತ್ವದ ‘ಭಾರತ್ ರಾಷ್ಟ್ರ ಸಮಿತಿ’ಯೂ ಚುನಾವಣೆಗೆ ಅಣಿಯಾಗಿವೆ.
‘ಮರಾಠ ಮೀಸಲಾತಿ ಮುಂಚೂಣಿಯಲ್ಲಿರುವ ಮನೋಜ್ ಜಾರಂಗೆ ಹಾಗೂ ಹಿಂದುಳಿದ ವರ್ಗದಡಿ ‘ಕುಣಬಿ’ಗಳಿಗೆ ಮೀಸಲಾತಿ ನೀಡುವುದರ ವಿರುದ್ಧ ಚಳವಳಿ ನಡೆಸುತ್ತಿರುವ ಲಕ್ಷ್ಮಣ್ ಹಾಕೆ ಅವರು ಇಡೀ ರಾಜ್ಯದಾದ್ಯಂತ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಚುನಾವಣೆಯೂ ಮತ್ತಷ್ಟು ಸಂಕೀರ್ಣವಾಗಲಿದೆ’ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
‘ವಿಬಿಎನಿಂದ 100 ಒಬಿಸಿ ಶಾಸಕರನ್ನು ಆಯ್ಕೆಮಾಡಿದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಳ ಮೀಸಲಾತಿ ಉಳಿಸಬಹುದು’ ಎಂದು ಪ್ರಕಾಶ್ ಅಂಬೇಡ್ಕರ್ ಅಭಿಯಾನ ಆರಂಭಿಸಿದ್ದಾರೆ. ರಾಜ್ಯದಾದ್ಯಂತ ಪಕ್ಷದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಈಗಾಗಲೇ ಸುಳಿವು ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದ ರಾಜ್‌ಠಾಕ್ರೆ (ಎಂಎನ್‌ಎಸ್), ರಾಜ್ಯದಲ್ಲಿ 225ರಿಂದ 250 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ. ‘ಲೋಕಸಭೆಗೆ ಬಿಜೆಪಿ ಬೆಂಬಲಿಸಿದ್ದು ನಿಜ, ವಿಧಾನಸಭಾ ಚುನಾವಣೆ ನಾನೂ ಇನ್ನಷ್ಟೇ ನಿರ್ಧರಿಸಬೇಕಿದೆ’ ಎಂದು ತಿಳಿಸಿದ್ದಾರೆ.
ಪಶ್ಚಿಮ ಮಹಾರಾಷ್ಟ್ರದಲ್ಲಿರುವ ಉತ್ತಮ ಹಿಡಿತ ಹೊಂದಿರುವ ರೈತ ನಾಯಕ ರಾಜುಶೆಟ್ಟಿ ಅವರು ಎಐಎಂಐಎಂನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಇಮ್ತಿಯಾಜ್ ಜಲೀಲ್, ವಿದರ್ಭಾದ ರೈತ ನಾಯಕ ವಾಮನ್‌ರಾವ್ ಚತಾಪ್, ಬಿಆರ್‌ಎಸ್ ನಾಯಕ ಶಂಕರ್ ಧೋಂಡ್ಗೆ ಜತೆ ಮಾತುಕತೆ ನಡೆಸಿದ್ದು, ‘ತೃತೀಯ ರಂಗ’ ರಚಿಸುವ ಪ್ರಯತ್ನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.