ಮುಂಬೈ: ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಬೆಂಬಲಿಸಿ ಮಹಾರಾಷ್ಟ್ರದ ಶಾಸಕರು ಪಕ್ಷಭೇದ ಮರೆತು ವಿಧಾನಸಭೆಯ ಸಚಿವಾಲಯದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಮುದಾಯದ ಹೋರಾಟಗಾರ ಮನೋಜ್ ಜಾರಂಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅಲ್ಲದೆ ಗ್ರಾಮಗಳಿಗೆ ರಾಜಕೀಯ ಮುಖಂಡರ ಪ್ರವೇಶ ನಿರ್ಬಂಧಿಸಿದ ಬೆನ್ನಲ್ಲೇ, ಪಕ್ಷಾತೀತವಾಗಿ ಶಾಸಕರು ಮೀಸಲಾತಿ ಪರ ಹೋರಾಟಕ್ಕೆ ಮುಂದಾಗಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ಸಚಿವಾಲಯದ ಮುಂಭಾಗ ಪ್ರತಿಭಟನೆ ನಡೆಸಿದ ಆಡಳಿತಾರೂಢ ಬಿಜೆಪಿ, ಎನ್‌ಸಿಪಿ ಮತ್ತು ಶಿವಸೇನಾ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು, ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜೈಲ್ ಭರೋ: ಮರಾಠ ಮೀಸಲಾತಿಗೆ ಒತ್ತಾಯಿಸಿ ರಾಜ್ಯದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಬಹುತೇಕ ಗ್ರಾಮಸ್ಥರು ಗುರುವಾರ ‘ಜೈಲ್ ಬರೋ’ ಪ್ರತಿಭಟನೆ ನಡೆಸಿದರು.
ಸ್ಥಳೀಯ ಶಾಸಕ ಕೈಲಾಸ ಪಾಟೀಲ ಅವರ ಬಂಧನದ ಬಳಿಕ ಧಾರಾಶಿವ ನಗರ ಹಾಗೂ ಆನಂದನಗರದ ಗ್ರಾಮೀಣ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಈ ವೇಳೆ ಯಾವುದೇ ಅವಘಡಗಳು ನಡೆಯದಂತೆ ನಿಯಂತ್ರಿಸಲು ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಕೌದಗಾಂವ್ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ 42 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಕುಣಬಿ ಜಾತಿ ಪ್ರಮಾಣ ಪತ್ರ’ ಹಿಂತಿರುಗಿಸಲು ನಿರ್ಧಾರ
ಧಾರಾಶಿವ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮೀಕ್ಷೆ ಬಳಿಕ ಮರಾಠ ಸಮುದಾಯದ ಸದಸ್ಯರೊಬ್ಬರಿಗೆ ಕುಣಬಿ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ರಾಜ್ಯದ ಮರಾಠ ಸಮುದಾಯದ ಎಲ್ಲರಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಈ ಪ್ರಮಾಣ ಪತ್ರವನ್ನು ಅಧಿಕಾರಿಗಳಿಗೆ ವಾಪಸ್ ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು ‘ಸುಮಿತ್ ಮಾನೆ ಎಂಬುವರಿಗೆ ಕುಣಬಿ ಜಾತಿ ಪ್ರಮಾಣ ಪತ್ರವನ್ನು ಬುಧವಾರ ನೀಡಲಾಗಿತ್ತು. ಆದರೆ ಸರ್ಕಾರ ತನಗೊಬ್ಬನಿಗೆ ಉಣ್ಣಿಸಿ ಸಮುದಾಯದ ತನ್ನ ಸಹೋದರರನ್ನು ಉಪವಾಸದಲ್ಲಿರುವಂತೆ ಮಾಡಿರುವುದನ್ನು ಒಪ್ಪಲಾಗದು. ಹೀಗಾಗಿ ಪ್ರಮಾಣ ಪತ್ರವನ್ನು ವಾಪಸ್ ನೀಡುತ್ತೇನೆ. ಇಲ್ಲದಿದ್ದರೆ ಬೆಂಕಿಗೆ ಹಾಕುತ್ತೇನೆ ಎಂದಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.