ಮುಂಬೈ: ಪಕ್ಷ ಬಿಟ್ಟವರ ವಿರುದ್ಧ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಶಿವಸೇನಾದ (ಯುಟಿಬಿ) ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷವೂ ರಣರಂಗದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದೆ ಎಂದು ನುಡಿದಿದ್ದಾರೆ.
‘ಶರದ್ ಪವಾರ್ ಹಾಗೂ ಅವರ ಸಂಗಡಿಗರು ಪಕ್ಷ ಬಿಟ್ಟವರ ವಿರುದ್ಧ ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸುತ್ತಿದ್ದಾರೆ. ಶರದ್ ಪವಾರ್ ಯಾವತ್ತೂ ಬಿಜೆಪಿ ಜತೆ ಕೈಜೋಡಿಸುವುದಿಲ್ಲ. ಅವರು ಮಹಾ ವಿಕಾಸ್ ಅಘಾಡಿ ಹಾಗೂ ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು. ಅವರು ಎರಡು ಕಲ್ಲಿನ ಮೇಲೆ ಕಾಲಿಟ್ಟಿಲ್ಲ. ಶರದ್ ಪವಾರ್ ಬಗ್ಗೆ ಯಾರಿಗೂ ಅನುಮಾನ ಇಲ್ಲ’ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಎರಡೂ ಪಕ್ಷಗಳು ಒಡೆದುಹೋಗಿದ್ದರಿಂದ ನಷ್ಟವಾಗಿದೆ ಎನ್ನುವ ವಾದವನ್ನು ಅವರು ತಳ್ಳಿ ಹಾಕಿದ್ದಾರೆ.
ಅಜಿತ್ ಪವಾರ್ ಹಾಗೂ 8 ಶಾಸಕರು ಜುಲೈ 2 ರಂದು ಏಕನಾಥ ಶಿಂದೆನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದರು. ಅಜಿತ್ ಉಪ ಮುಖ್ಯಮಂತ್ರಿಯಾಗಿಯೂ ಕೆಲ ಶಾಸಕರು ಸಚಿವರಾಗಿಯೂ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಇದರಿಂದಾಗಿ ಎನ್‌ಸಿಪಿ ಇಬ್ಭಾಗವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.