ನವದೆಹಲಿ: ತಮಿಳಗ ವೆಟ್ರಿ ಕಳಗಂ(ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವ ತಮ್ಮ ಪಕ್ಷದ ನಿರ್ಧಾರವನ್ನು ‘ಭೀಕರ’ ಎಂದು ಕರೆದಿರುವ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ಇದು ಕೀಳುಮಟ್ಟದ ರಾಜಕೀಯ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಅವರು, ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿ ಈಗ ನಾವು ಸ್ಪರ್ಧಿಸಿ ಸೋತ 23 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಗೆದ್ದ 5 ಕ್ಷೇತ್ರಗಳಲ್ಲಿ ನಮ್ಮನ್ನು ಎದುರಿಸಿದ್ದ ಟಿವಿಕೆ ಜೊತೆ ಸಂಬಂಧ ಬೆಳೆಸಲು ಕಾಂಗ್ರೆಸ್ ನಿರ್ಧರಿಸಿರುವುದು ಸರಿಯಾದ ನಿರ್ಧಾರವಲ್ಲ ಎಂದು ಹೇಳಿದ್ದಾರೆ.

‘ಇದು ಮಹಾತ್ಮ ಗಾಂಧಿಯವರ 'ಸ್ವರಾಜ್ಯವು ನೈತಿಕತೆಯ ಮೇಲೆ ಆಧಾರಿತವಾದ ಸರ್ಕಾರವಾಗಿರಬೇಕು' ಎಂಬ ತತ್ವದ ಕ್ಷಮಿಸಲಾಗದ ಉಲ್ಲಂಘನೆಯಾಗಿದೆ’ ಎಂದು ತಿಳಿಸಿದ್ದಾರೆ.

ಲೇಖನದಲ್ಲಿ ವಿಷಾದ ವ್ಯಕ್ತಪಡಿಸಿದ ಅಯ್ಯರ್

ಟಿವಿಕೆ ಮತ್ತು ಕಾಂಗ್ರೆಸ್ ಮೈತ್ರಿಯ ಬಗ್ಗೆ ಇಂದು(ಶುಕ್ರವಾರ) ಹಿಂದೂ ಪತ್ರಿಕೆಯ ತಮಿಳು ಆವೃತ್ತಿಯಲ್ಲಿ ಪ್ರಕಟವಾದ ಲೇಖನದಲ್ಲಿ ಅಯ್ಯರ್ ಟೀಕಿಸಿ ಬರೆದಿದ್ದಾರೆ.

‘ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿರುವುದು ತನ್ನ ಸ್ವಂತ ಬಲದಿಂದಲ್ಲ, ಬದಲಿಗೆ ಡಿಎಂಕೆ ಜೊತೆಗಿನ ದಶಕಗಳ ಹಳೆಯ ಮೈತ್ರಿಯ ಬಲದಿಂದ. ನಾನು ಈ ಹಿಂದೆ ಸ್ಪರ್ಧಿಸಿದ್ದ ಮೈಲಾಡುತುರೈ ಲೋಕಸಭಾ ಕ್ಷೇತ್ರ ಡಿಎಂಕೆ ನೇತೃತ್ವದ ಮೈತ್ರಿಗೆ ಭದ್ರಕೋಟೆಯಾಗಿರುವುದು ಸಾಬೀತಾಗಿದೆ. ಅಲ್ಲಿನ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ವಿಜಯ್ ಅವರ ಟಿವಿಕೆ ವಿರುದ್ಧ ಮೈತ್ರಿಕೂಟಕ್ಕೆ ಮತ ಚಲಾಯಿಸಲಾಗಿದೆ. ಇದರಲ್ಲಿ ಎರಡು ಸ್ಥಾನಗಳು ಡಿಎಂಕೆಗೆ ಗೆದ್ದಿದ್ದರೆ, ಎಎಂಡಿಕೆ, ಐಯೂಎಂಎಲ್ ಹಾಗೂ ಕಾಂಗ್ರೆಸ್ಗೆ ತಲಾ ಒಂದು ಸ್ಥಾನಗಳು ಲಭಿಸಿವೆ’ ಎಂದು ಲೇಖನದಲ್ಲಿ ಹೇಳಿದ್ದಾರೆ.

ಹೀಗಾಗಿ, ಜನಾದೇಶವು ಸ್ಪಷ್ಟವಾಗಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಪರವಾಗಿದ್ದು, ಹೊಸಬರ ವಿರುದ್ಧವಾಗಿದೆ. ಕಳೆದ 35 ವರ್ಷಗಳಿಂದ ಈ ಕ್ಷೇತ್ರದೊಂದಿಗಿನ ನನ್ನ ಒಡನಾಟದ ಹಿನ್ನೆಲೆಯಲ್ಲಿ ನಾನು ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.

ಗಾಂಧಿ ಮೌಲ್ಯಗಳಿಗೆ ಅಪಮಾನ:

‘ಅವಕಾಶವಾದವು ಚಾಣಕ್ಯ ರಾಜಕೀಯದ ಸಾರವಾಗಿದೆ. ಇದು ಗಾಂಧಿಯವರ ಸತ್ಯದ ರಾಜಕೀಯವಲ್ಲ. ಅವರು ಇಂತಹ ಹಿತಾಸಕ್ತಿಯ ರಾಜಕೀಯವನ್ನು ಆಶೀರ್ವದಿಸುವುದನ್ನು ನನಗೆ ಊಹಿಸಲೂ ಸಾಧ್ಯವಿಲ್ಲ’ ಎಂದಿದ್ದಾರೆ.

ಜವಾಹರಲಾಲ್ ನೆಹರೂ ಅವರು ಬದುಕಿದ್ದರೆ ಕಾಂಗ್ರೆಸ್ನ ಈ ನಿರ್ಧಾರವನ್ನು ವಿರೋಧಿಸುತ್ತಿದ್ದರು ಎಂದೂ ಹೇಳಿದ್ದಾರೆ.

'ಓಟ ಮುಗಿದ ನಂತರ ನಾವು ಕುದುರೆಗಳನ್ನು ಬದಲಿಸಿರುವುದು ತೀವ್ರ ಅಸಮಾಧಾನ ತಂದಿದೆ. ಈ ಬದಲಾವಣೆಯ ಮೂಲಕ ನಾವು ನಮ್ಮ ಮಹಾತ್ಮರು ಕಲಿಸಿದ ಸನ್ನಡತೆ, ಸ್ವಯಂ ನಿಯಂತ್ರಣ ಮತ್ತು ಸ್ವಯಂ ತ್ಯಾಗಕ್ಕಿಂತ ಹೆಚ್ಚಾಗಿ, ತಕ್ಷಣದ ಪ್ರತಿಫಲಕ್ಕಾಗಿ ಹಪಹಪಿಸುವ ರಾಜಕೀಯಕ್ಕೆ ಮೊರೆ ಹೋಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಇಂಡಿಯಾ ಮೈತ್ರಿಕೂಟದಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಎಂದು ಘೋಷಿಸಿದ ಏಕೈಕ ಪಾಲುದಾರನನ್ನು (ಡಿಎಂಕೆ) ಕೈಬಿಟ್ಟಿರುವುದನ್ನು ಕಾಂಗ್ರೆಸ್ ಹೇಗೆ ಸಮರ್ಥಿಸಿಕೊಳ್ಳುತ್ತದೆ?’ ಎಂದು ಅವರು ಪ್ರಶ್ನಿಸಿದ್ದಾರೆ.

ನೈತಿಕತೆ ವರ್ಸ್ಸ್ ರಾಜಕೀಯ:

‘ನಾವು ಮುಳುಗುತ್ತಿರುವಾಗ, ನಮ್ಮನ್ನು ಮುಳುಗಿಸಿದವರೊಂದಿಗೆ ದಡ ಸೇರಲು ಹೊರಟಿರುವುದು ಸರಿಯೇ? ಒಂದು ಅಥವಾ ಎರಡು ಸಚಿವ ಸ್ಥಾನಗಳಿಗಾಗಿ ನಾವು ನಮ್ಮ ಗೌರವವನ್ನು ಮಾರಿಕೊಳ್ಳುತ್ತಿದ್ದೇವೆಯೇ?’ ಎಂದು ಅಯ್ಯರ್ ಪ್ರಶ್ನಿಸಿದ್ದಾರೆ.

‘ವ್ಯಾವಹಾರಿಕ ದೃಷ್ಟಿಕೋನದಿಂದ ನೋಡಿದರೂ, ಕಾಂಗ್ರೆಸ್ ಸ್ಥಿರವಾಗಿರುವ ಹಡಗನ್ನು ಏರುತ್ತಿದೆಯೇ ಅಥವಾ ಮುಳುಗುತ್ತಿರುವ ಹಡಗನ್ನು ಸೇರುತ್ತಿರುವ ಇಲಿಯಂತಾಗಿದೆಯೇ’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

‘ನೈತಿಕತೆ ಮತ್ತು ರಾಜಕೀಯ ಒಂದೆಡೆ ಸಂಧಿಸುತ್ತಿವೆ ಎಂದು ನನಗನಿಸುತ್ತದೆ. ನಮ್ಮ ಕಷ್ಟಕಾಲದಲ್ಲೂ ನಮ್ಮೊಂದಿಗೆ ನಿಂತಿರುವ ಡಿಎಂಕೆಯೊಂದಿಗೆ ಇರುವುದು ನೈತಿಕತೆ. ಆಮಿಷಗಳಿಗೆ ಬಲಿಯಾಗಿ ಟಿವಿಕೆ ಜೊತೆ ಸೇರುವುದು ರಾಜಕೀಯ’ ಎಂದು ಅವರು ಹೇಳಿದ್ದಾರೆ.

‘ಮೈತ್ರಿಯ ವಿಷಯದಲ್ಲಿ ಪಕ್ಷವು ಕಾದುನೋಡುವ ತಂತ್ರವನ್ನು ಬಳಸಬೇಕಿತ್ತು. ತಕ್ಷಣಕ್ಕೆ ನಿರ್ಧಾರಕ್ಕೆ ಬರದೇ ಕೆಲ ಸಮಯ ಕಾದಿದ್ದರೆ 2029 ಅಥವಾ 2031ರಲ್ಲಿ ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದನ್ನು ಗೌರವಯುತವಾಗಿ ನಿರ್ಧರಿಸಬಹುದಿತ್ತು. ಆದರೆ, ಕಾಂಗ್ರೆಸ್ ಸ್ಪರ್ಧಿಸಿದ 28 ಕ್ಷೇತ್ರಗಳ ಪೈಕಿ 23ರಲ್ಲಿ ನಮ್ಮನ್ನು ಸೋಲಿಸಲು ಶ್ರಮಿಸಿದ ಪಕ್ಷದೊಂದಿಗೆ ಮೈತ್ರಿ ಆಗುತ್ತಿರುವುದು ಅನೈತಿಕ ಮಾತ್ರವಲ್ಲದೆ ರಾಜಕೀಯವಾಗಿ ಮಂದಬುದ್ಧಿ’ ಎಂದಿದ್ದಾರೆ.

‘ಒಂದು ವೇಳೆ ಇದು ತಮಿಳುನಾಡಿನ ದ್ರಾವಿಡ ರಾಜಕೀಯಕ್ಕೆ ಕೋಮುವಾದಿ ಬಿಜೆಪಿ ಹಿಂಬಾಗಿಲಿನಿಂದ ಬರಲು ದಾರಿ ಮಾಡಿಕೊಟ್ಟರೆ, ಅದು ರಾಜಕೀಯ ಫುಟ್ಬಾಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಗೋಲ್ ಎಂದು ಸಾಬೀತಾಗಲಿದೆ. ನಮ್ಮನ್ನು ಮತ್ತೆ ಯಾರು ತಾನೇ ನಂಬುತ್ತಾರೆ?’ ಎಂದು ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.