ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠ ಮೀಸಲು: ಡಿ.24ರವರೆಗೆ ಗಡುವು

ಜರಾಂಗೆ ಆಮರಣ ನಿರಶನ ಅಂತ್ಯ * ಸ್ಪಂದಿಸದಿದ್ದರೆ ಮುಂಬೈಗೆ ರ‍್ಯಾಲಿ ಎಚ್ಚರಿಕೆ
Published 2 ನವೆಂಬರ್ 2023, 16:32 IST
Last Updated 2 ನವೆಂಬರ್ 2023, 16:32 IST
ಅಕ್ಷರ ಗಾತ್ರ

ಜಲ್ನಾ, ಮಹಾರಾಷ್ಟ್ರ: ಮರಾಠ ಕೋಟಾ ಮೀಸಲಾತಿಗೆ ಪಟ್ಟುಹಿಡಿದು ಒಂಬತ್ತು ದಿನಗಳಿಂದ ನಡೆಸುತ್ತಿದ್ದ ಆಮರಣಾಂತ ನಿರಶನವನ್ನು ಹೋರಾಟಗಾರ ಮನೋಜ್‌ ಜರಾಂಗೆ ಪಾಟೀಲ ಗುರುವಾರ ತಂಪುಪಾನೀಯ ಕುಡಿಯುವ ಮೂಲಕ ಅಂತ್ಯಗೊಳಿಸಿದರು.

‘ಮರಾಠರಿಗೆ ಮೀಸಲಾತಿ ನೀಡುವ ಕುರಿತು ಡಿಸೆಂಬರ್‌ 24ರೊಳಗೆ ತೀರ್ಮಾನಿಸಬೇಕು. ಇಲ್ಲದಿದ್ದರೆ ಮುಂಬೈಗೆ ಬೃಹತ್‌ ಪ್ರಮಾಣದ ಜಾಥಾ ಕೈಗೊಳ್ಳಲಾಗುವುದು’ ಎಂದೂ ಸರ್ಕಾರಕ್ಕೆ ಗಡುವು ನೀಡಿದರು.

‘ಮೀಸಲಾತಿಗಾಗಿ ಪ್ರತಿಭಟನೆಯು ತೀವ್ರಗೊಂಡರೆ ಮುಂಬೈನ ಜನರಿಗೆ ತರಕಾರಿಯೂ ಸಿಗುವುದಿಲ್ಲ. ಈಗ ನಾನು ಆಮರಣ ನಿರಶನವನ್ನಷ್ಟೇ ಅಂತ್ಯಗೊಳಿಸಿದ್ದೇನೆ. ಆದರೆ, ಪ್ರತಿಭಟನೆ, ಅನಿರ್ದಿಷ್ಟಾವಧಿ ಧರಣಿಯು ಮುಂದುವರಿಯಲಿದೆ’ ಎಂದು ಅವರು ಹೇಳಿದರು. 

ಇದಕ್ಕೂ ಮುನ್ನ ಅವರು ನಿರಶನ ನಡೆಸುತ್ತಿದ್ದ ಜಲ್ನಾ ಜಿಲ್ಲೆಯ ಆಂತರವಾಲಿ ಸರಾಟಿ ಗ್ರಾಮಕ್ಕೆ ಭೇಟಿ ನೀಡಿದ್ದ ಮಹಾರಾಷ್ಟ್ರದ ನಾಲ್ವರು ಸಚಿವರು, ಆಮರಣಾಂತ ನಿರಶನ ಕೈಬಿಡಲು ಮನವಿ ಮಾಡಿದ್ದರು.

ತೀರ್ಮಾನ ಕೈಗೊಳ್ಳಲು ಸರ್ಕಾರಕ್ಕೆ ನೀಡಿರುವ ಗಡುವನ್ನು ಜನವರಿ 2ವರೆಗೆ ವಿಸ್ತರಿಸಬೇಕು ಎಂದು ಸಚಿವರು ಮನವಿ ಮಾಡಿದರು. ಇದಕ್ಕೆ ಜರಾಂಗೆ ಅವರು ಸ್ಪಂದಿಸಲಿಲ್ಲ.

ಅಲ್ಲದೆ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಸಂದೀಪ್‌ ಶಿಂದೆ, ಎಂ.ಜಿ.ಗಾಯಕ್ವಾಡ್‌ ಹಾಗೂ ಕೆಲ ಅಧಿಕಾರಿಗಳು ಜರಾಂಗೆ ಅವರನ್ನು ಭೇಟಿಯಾಗಿದ್ದರು.

ಭೇಟಿ ಸಂದರ್ಭದಲ್ಲಿ ‘ಮರಾಠ ಸಮುದಾಯಕ್ಕೆ ಪೂರ್ಣಪ್ರಮಾಣದಲ್ಲಿ ಮೀಸಲಾತಿಯನ್ನು ನಿಗದಿಪಡಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರವು ಸ್ಪಷ್ಟವಾದ ಭರವಸೆ ನೀಡಬೇಕು’ ಎಂದು ಜರಾಂಗೆ ಪಟ್ಟುಹಿಡಿದರು. ಮರಾಠ ಸಮುದಾಯವರಿಗೆ ಮೀಸಲಾತಿ ಸಿಗುವವರೆಗೂ ನಾನು ಮನೆಗೆ ತೆರಳುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT