ನವದೆಹಲಿ: ಕುಟುಂಬ ಮತ್ತು ಸಂಪತ್ತಿನ ಕುರಿತು ಮೋಸದ ಮಾತುಗಳನ್ನಾಡಿ ಮದುವೆ ಮಾಡಿಸಿದ್ದಾರೆ ಎಂಬ ಆರೋಪದ ಮೇಲೆ ವಿವಾಹವನ್ನು ರದ್ದುಗೊಳಿಸಲು ಆಗದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
‘ಸೌಂದರ್ಯವರ್ಧಕ ಉದ್ಯಮದಲ್ಲಿ ತೊಡಗಿಸಿಕೊಂಡಿರುವುದಾಗಿ ನಂಬಿಸಿ ಪತ್ನಿ ನನ್ನನ್ನು ವಂಚಿಸಿದ್ದಾಳೆ. ಆಕೆಯ ಆಸ್ತಿಯಲ್ಲಿ ಒಟ್ಟಾಗಿ ಉದ್ಯಮ ಸ್ಥಾಪಿಸಬಹುದೆಂದು ಸುಳ್ಳು ಆಶ್ವಾಸನೆ ನೀಡಿ ನನಗೆ ಮೋಸ ಮಾಡಿದ್ದಾಳೆ. ಅವಳು ಈಗ ತಲೆಮರೆಸಿಕೊಂಡಿದ್ದಾಳೆ. ಹೀಗಾಗಿ ಹಿಂದೂ ವಿವಾಹ ಕಾಯಿದೆ (ಎಚ್‌ಎಂಎ) ಅಡಿಯಲ್ಲಿ ವಿವಾಹವನ್ನು ರದ್ದುಗೊಳಿಸಬೇಕು’ ಎಂದು ಕೋರಿ ವ್ಯಕ್ತಿಯೊಬ್ಬರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ನೇತೃತ್ವದ ಪೀಠ ‘ಮದುವೆಗೆ ಆಧಾರವಾಗಿರುವ ವಸ್ತು ವಿಷಯಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದರೆ ಮಾತ್ರ ವಿವಾಹ ರದ್ದತಿಗೆ ಅವಕಾಶವಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಮಾಡಲಾಗಿರುವ ಆರೋಪಗಳು ಮದುವೆ ಸಮಾರಂಭಕ್ಕೆ ಸಂಬಂಧಿಸಿಲ್ಲ ಅಥವಾ ವೈವಾಹಿಕ ಜೀವನಕ್ಕೂ ಸಂಬಂಧಿಸಿಲ್ಲ’ ಎಂದು ಹೇಳಿತು. ಜತೆಗೆ ಮದುವೆಯನ್ನು ರದ್ದುಗೊಳಿಸಲು ನಿರಾಕರಿಸಿತು.
‘ಅಪೀಲುದಾರರ (ಪತಿ) ಪ್ರಕಾರ ಅವರಿಬ್ಬರೂ ಪರಿಚಯಸ್ಥರಾಗಿದ್ದು ಪ್ರೇಮವಿವಾಹ ಮಾಡಿಕೊಂಡಿದ್ದಾರೆ. ಈ ವಿಷಯ ಇಲ್ಲಿ ಗಮನಾರ್ಹ ಸಂಗತಿ. ಪ್ರತಿವಾದಿಯು (ಪತ್ನಿ) ಉದ್ದಿಮೆಯನ್ನು ಸ್ಥಾಪಿಸಲು ಸಾಕಷ್ಟು ಸಂಪನ್ಮೂಲ ಹೊಂದಿದ್ದರು ಎಂಬುದನ್ನು ಸಾಬೀತು ಮಾಡಲು ಇಲ್ಲಿ ಸಾಕ್ಷ್ಯಗಳಿಲ್ಲ. ಹೀಗಾಗಿ ಇದು ವಂಚನೆ ಎನಿಸಿಕೊಳ್ಳದು. ಮದುವೆಗೆ ಸಂಬಂಧಿಸಿದ ಸಂಗತಿಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಹೇಳಲೂ ಆಗದು’ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರನ್ನೊಳಗೊಂಡ ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
‘ಕುಟುಂಬ ಅಥವಾ ಸಂಪತ್ತು, ಜಾತಿ–ಧರ್ಮ, ವಯಸ್ಸು ಅಥವಾ ಪಾತ್ರಕ್ಕೆ ಸಂಬಂಧಿಸಿದ ಮೋಸದ ಹೇಳಿಕೆಗಳಿಂದ ಮದುವೆಗೆ ಪ್ರೇರೇಪಿಸಲಾಗಿದೆ ಎಂಬ ಕಾರಣ ನೀಡಿ ಅರ್ಜಿದಾರನು ಇಲ್ಲಿ ಮದುವೆಯನ್ನು ಮುರಿದುಕೊಳ್ಳಲು ಆಗದು‘ ಎಂದು ನ್ಯಾಯಾಲಯ ತಿಳಿಸಿತು.
2019ರಲ್ಲಿ ನಡೆದಿದ್ದ ತನ್ನ ವಿವಾಹವನ್ನು ರದ್ದು ಮಾಡುವಂತೆ ಕೋರಿದ್ದ ವ್ಯಕ್ತಿಯೊಬ್ಬರ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವೊಂದು ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ವ್ಯಕ್ತಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.