ಆಗ್ರಾದ ತಾಜ್ ಮಹಲ್ ನೋಡಲು ಹೋದರೆ, ನಾವು ಪ್ರವೇಶದ್ವಾರದಲ್ಲೇ ಹುಬ್ಬೇರಿಸುತ್ತೇವೆ. ತಡ ಮಾಡದೇ, ಕ್ಯಾಮೆರಾದಿಂದ ಚಿತ್ರಗಳನ್ನು ಕ್ಲಿಕ್ಕಿಸುತ್ತೇವೆ. ಮೊಬೈಲ್ ಫೋನ್ಗಳಲ್ಲಿ ಸೆಲ್ಫಿ ಚಿತ್ರಗಳನ್ನು ತೆಗೆದು ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ಗಳಲ್ಲಿ ಹಾಕತೊಡಗುತ್ತೇವೆ. ಅತ್ಯಂತ ಶುಚಿಯಾದ ಶ್ವೇತ ಅಮೃತಶಿಲೆಗಳಿಂದ ಕೂಡಿರುವ ಸ್ಥಳದಲ್ಲಿ ಸಂಭ್ರಮಿಸುತ್ತೇವೆ.

ಅದೇ ಸ್ಥಳಕ್ಕೆ ಹೋದ ವಕೀಲ ಮಹೇಶಚಂದ್ರ ಮೆಹ್ತಾ ಅವರು ಇದ್ಯಾವುದನ್ನೂ ಮಾಡಲಿಲ್ಲ. ಅವರಿಗೆ ತಾಜ್ನ ಬಿಳಿ ಕಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದು ಕಂಡಿತು. ಕೈಗಾರಿಕೆಗಳ ಮಾಲಿನ್ಯದಿಂದ ಅಲ್ಲಿನ ಇಡೀ ಪರಿಸರವು ಮಸುಕು ಆಗುತ್ತಿರುವುದು ಕಾಣಿಸಿತು. ಅಲ್ಲಿ ಒಟ್ಟಾರೆ ಸೌಂದರ್ಯಕ್ಕೆ ಧಕ್ಕೆ ಆಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು.

ಅವರು ಮಾಡಿದ್ದು ಇಷ್ಟೇ: ಅತಿಯಾದ ಮಾಲಿನ್ಯದಿಂದ ತಾಜ್ ಮಹಲ್ಗೆ ಧಕ್ಕೆ ಆಗುತ್ತದೆ. ಸುತ್ತಮುತ್ತಲಿನ ಕಾರ್ಖಾನೆಗಳನ್ನು ಬಂದ್ ಮಾಡಿ, ಇಲ್ಲವೇ ಕಠಿಣ ಕ್ರಮ ಜರುಗಿಸಿ ಎಂದು ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದರು. ಸತತ 10 ವರ್ಷ ಹೋರಾಟ ನಡೆಸಿ, ಮಾಲಿನ್ಯದ ಪ್ರಮಾಣ ಸಂಪೂರ್ಣವಾಗಿ ನಿಯಂತ್ರಿಸಲು ಶ್ರಮಿಸಿದರು.

ತಾಜ್ ಮಹಲ್ ಉಳಿವು ಮತ್ತು ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ ಮಹೇಶಚಂದ್ರ ಮೆಹ್ತಾ ಅವರು 1984ರಲ್ಲಿ ಪಿಐಎಲ್ ಸಲ್ಲಿಸಿದಾಗ, ಹಲವು ಸ್ವರೂಪದ ಬೆದರಿಕೆಗಳು ಬಂದವು. ಸರ್ಕಾರದಿಂದ ಅಲ್ಲದೇ ಪ್ರಭಾವಿ ವ್ಯಕ್ತಿಗಳಿಂದ ಒತ್ತಡಗಳು ಬಂದವು. ಪಿಐಎಲ್ ಹಿಂಪಡೆಯದಿದ್ದರೆ, ಜೀವಕ್ಕೆ ಅಪಾಯವಾಗಲಿದೆ ಎಂಬ ಬೆದರಿಕೆಯೂ ಬಂತು.

ಯಾವುದಕ್ಕೂ ಜಗ್ಗದ ಮತ್ತು ಬಗ್ಗದ ಮೆಹ್ತಾ ಅವರು ತಮ್ಮ ಸ್ವಂತ ಹಣ ಖರ್ಚು ಮಾಡಿದರು. ಕೈಗಾರಿಕೆಗಳು ಉಗುಳುವ ಹೊಗೆಯಿಂದ ಅದರಲ್ಲೂ ಸಲ್ಫರ್ ಡೈಆಕ್ಸೈಡ್ ಪರಿಣಾಮದಿಂದ ಸ್ಮಾರಕಕ್ಕೆ ಧಕ್ಕೆ ಆಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಇದರ ಕುರಿತು ಸತತ ವಿಚಾರಣೆ, ಅಧ್ಯಯನ ನಡೆಯಿತು.

1996ರಲ್ಲಿ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ‘ತಾಜ್ ಮಹಲ್ನ್ನು ಮಾಲಿನ್ಯದಿಂದ ರಕ್ಷಿಸುವ ಉದ್ದೇಶದಿಂದ ‘ತಾಜ್ ಸಂರಕ್ಷಿತ ವಲಯ’ (ಟಿಟಿಝೆಡ್) ರಚಿಸಲಾಗಿದೆ. ಆಗ್ರಾ, ಮಥುರಾ, ಫಿರೋಜಾಬಾದ್, ಹತ್ರಾಸ್, ರಾಜಸ್ಥಾನದ ಭರತ್ಪುರ ಒಳಗೊಂಡ 10,400 ಚದರ ಕಿ.ಮೀ ಪ್ರದೇಶವು (ಚತುರ್ಭುಜ ಮಾದರಿ) ಈ ವ್ಯಾಪ್ತಿಗೆ ಬರುತ್ತದೆ’ ಎಂದು ಹೇಳಿತು. ಮಾಲಿನ್ಯ ನಿಯಂತ್ರಣ ಸಾಧನಗಳನ್ನು ಅಳವಡಿಸದ ಆರೋಪದ ಮೇಲೆ 212 ಕಾರ್ಖಾನೆಗಳನ್ನು ಬಂದ್ ಮಾಡಲಾಯಿತು. 300 ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಲಾಯಿತು. ಇನ್ನೂ ಕೆಲ ಕಾರ್ಖಾನೆಗಳು ಸ್ಥಳಾಂತರಗೊಂಡವು.

1986ರ ಆಸುಪಾಸಿನಲ್ಲಿ ಕಾರ್ಖಾನೆಗಳು ಸುರಿಯುವ ತ್ಯಾಜ್ಯದಿಂದ ಗಂಗಾ ನದಿಯು ದಿನಪೂರ್ತಿ ಹೊತ್ತಿ ಉರಿದಾಗ, ಸಿಟ್ಟಿಗೆದ್ದ ಮೆಹ್ತಾ ಅವರು ಆಯಾ ಕಾರ್ಖಾನೆಗಳ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿದರು. ಗಂಗಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿನ ಐದು ಸಾವಿರಕ್ಕೂ ಹೆಚ್ಚು ಕಾರ್ಖಾನೆಗಳಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಯಿತು. 200ಕ್ಕೂ ಹೆಚ್ಚು ಸುತ್ತಮುತ್ತಲ ಊರುಗಳಲ್ಲಿ ಒಳಚರಂಡಿ ಸಂಸ್ಕರಣ ಘಟಕಗಳನ್ನು ಅಳವಡಿಸಲು ಹೇಳಲಾಯಿತು.

ಇಷ್ಟಕ್ಕೆ ಸುಮ್ಮನಾಗದ ಮೆಹ್ತಾ ಅವರು ಪರಿಸರ ಮಾಲಿನ್ಯದಿಂದ ಆಗುತ್ತಿರುವ ದುಷ್ಪರಿಣಾಮ ಮತ್ತು ಹಾನಿಯನ್ನು ತಿಳಿಪಡಿಸಲು ಬೇರೆ ಬೇರೆ ಸ್ವರೂಪದ ಅಭಿಯಾನ ಕೈಗೊಂಡರು. ನವದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ನಿರಂತರ ಶ್ರಮಿಸಿದ ಅವರು, ಪರಿಸರ ಸಂಬಂಧಿತ ಕಾನೂನುಗಳು ಇನ್ನಷ್ಟು ಕಠಿಣ ಸ್ವರೂಪ ಪಡೆಯುವಂತೆ ಮಾಡಿದರು. ಸುಪ್ರೀಂ ಕೋರ್ಟ್ನ ಸುಮಾರು 40ಕ್ಕೂ ಹೆಚ್ಚು ಐತಿಹಾಸಿಕ ತೀರ್ಪುಗಳು ಪರಿಸರ ಸಂರಕ್ಷಣೆಯ ಪರ ಇರುವಂತೆ ವಕಾಲತ್ತು ಮಾಡಿದರು.

ಜಮ್ಮು ಕಾಶ್ಮೀರದ ರಾಜೌರಿಯಲ್ಲಿ 1946ರ ಡಿಸೆಂಬರ್ 12ರಂದು ಜನಿಸಿದ ಮೆಹ್ತಾ ಅವರು ಕಿರಿಯ ವಯಸ್ಸಿನಲ್ಲೇ ಪರಿಸರ ಸಂರಕ್ಷಣೆಯತ್ತ ಕಾಳಜಿ ವಹಿಸತೊಡಗಿದರು. ಜಮ್ಮು ಕಾಶ್ಮೀರ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಮತ್ತು ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಅವರು, ಜಮ್ಮು ಕಾಶ್ಮೀರದ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ಆರಂಭಿಸಿದರು.

ಸದ್ಯ ಅವರ ವಯಸ್ಸು 80. ಈಗಲೂ ಅವರು ವಿರಮಿಸಲು ಬಯಸಿಲ್ಲ. ‘ಎಂ.ಸಿ.ಮೆಹ್ತಾ ಪರಿಸರ ಪ್ರತಿಷ್ಠಾನ’ ಎಂಬ ಸ್ವಯಂ–ಸೇವಾ ಸಂಸ್ಥೆಯನ್ನು ಸ್ಥಾಪಿಸಿರುವ ಅವರು ಪರಿಸರ, ನೈಸರ್ಗಿಕ ಸಂಪನ್ಮೂಲ ಮತ್ತು ಸಾಂಸ್ಕೃತಿಕ ಪರಂಪರೆ ಉಳಿಸಲು ಶ್ರಮಿಸುತ್ತಿದ್ದಾರೆ. ಮೆಹ್ತಾ ಅವರಿಗೆ 40ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಂದಿವೆ.

‘ಕಾನೂನುಗಳು ಬರೀ ಪುಸ್ತಕಗಳಲ್ಲಿ ಅಥವಾ ಕಾಗದಗಳಲ್ಲಿ ಇದ್ದರೆ ಸಾಲದು. ಅವು ಕಾರ್ಯರೂಪಕ್ಕೆ ಬರಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಪರಿಸರಕ್ಕೆ ಸಂಬಂಧಿಸಿದ ನ್ಯಾಯಾಲಯ ಇರಬೇಕು. ಪರಿಸರ ಸಂರಕ್ಷಣೆಗೆ ಪೂರಕವಾದ ಕಾನೂನುಗಳನ್ನು ಇನ್ನಷ್ಟು ಸದೃಢಗೊಳಿಸಲು ಸಾರ್ವಜನಿಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಎಂ.ಸಿ.ಮೆಹ್ತಾ ಹೇಳುತ್ತಾರೆ. ಅಂದ ಹಾಗೆ, ಅವರಿಗೆ ಭಾರತದ ಪರಿಸರವಾದಿ ವಕೀಲ ಎಂಬ ಬಿರುದು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.