ನವದೆಹಲಿ: ‘ದೇಶದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ‘ಮೇರಿ ಮಾಠಿ ಮೇರಾ ದೇಶ್’ (ನನ್ನ ಮಣ್ಣು –ನನ್ನ ದೇಶ) ಅಭಿಯಾನವನ್ನು ಪ್ರಾರಂಭಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.
ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರ ಪುರುಷ ಹಾಗೂ ಮಹಿಳೆಯರನ್ನು ಗೌರವಿಸುವ ಹಿನ್ನೆಲೆಯಲ್ಲಿ ‘ಮೇರಿ ಮಾಠಿ ಮೇರಾ ದೇಶ್’ ಪ್ರಾರಂಭವಾಗುತ್ತಿದೆ.
ಮಾಸಿಕ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, ‘ಹುತಾತ್ಮರ ಸ್ಮರಣಾರ್ಥವಾಗಿ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು. ಅಭಿಯಾನದ ಅಡಿಯಲ್ಲಿ ಅಮೃತ ಕಳಸ ಯಾತ್ರೆಯನ್ನೂ ಆಯೋಜಿಸಲಾಗುವುದು. 7,500 ಕುಂಡಗಳಲ್ಲಿ ದೇಶದ ವಿವಿಧ ಭಾಗಗಳಿಂದ ಮಣ್ಣನ್ನು ಹಾಗೂ ಸಸಿಗಳನ್ನು ದೆಹಲಿಗೆ ತರಲಾಗುವುದು’ ಎಂದರು.
‘ವಿವಿಧ ಭಾಗಗಳಿಂದ ಬಂದ ಮಣ್ಣಿನಲ್ಲಿ ಸಸಿಗಳನ್ನು ನೆಟ್ಟು, ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಅಮೃತ ವಾಟಿಕಾ’ ನಿರ್ಮಿಸಲಾಗುವುದು. ಈ ವನ ‘ಏಕ ಭಾರತ ಶ್ರೇಷ್ಠ ಭಾರತ’ದ ಅತ್ಯುಚ್ಚ ಸಂಕೇತವಾಗಲಿದೆ’ ಎಂದು ಅವರು ತಿಳಿಸಿದರು.
ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಅಮೃತ ಮಹೋತ್ಸವದ ಅಂಗವಾಗಿ ಇದುವರೆಗೆ ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೋದಿ ಹೇಳಿದ ಇತರ ಪ್ರಮುಖ ಅಂಶಗಳು
* ಈ ವರ್ಷವೂ ‘ಹರ್ ಘರ್ ತಿರಂಗಾ’ ಅಭಿಯಾನ ಆಚರಿಸಲು ಪ್ರಧಾನಿ ಕರೆ.
* ದೇಶದ ವಿವಿಧ ಪವಿತ್ರ ಸ್ಥಳಗಳಿಗೆ ಯಾತ್ರಿಕರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಉಲ್ಲೇಖ.
* ದೇಶದಲ್ಲಿ ಮುಂಗಾರು ಋತುವಿನ ಸಂಭವಿಸಿದ ಪ್ರವಾಹ ಹಾಗೂ ನೈಸರ್ಗಿಕ ವಿಪತ್ತಿನಿಂದ ಜನರು ಅನುಭವಿಸಿದ ಸಮಸ್ಯೆಗಳ ಕುರಿತು ವಿಷಾದ ವ್ಯಕ್ತಪಡಿಸಿದ ಮೋದಿ.
* ಅಮೆರಿಕವು 250 ವರ್ಷದಷ್ಟು ಹಳೆಯ ಮತ್ತು 2,500 ಅಪರೂಪದ ಹಾಗೂ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಿದರ ಬಗ್ಗೆ ಮಾಹಿತಿ.
* ನೀರಿನ ಸಂರಕ್ಷಣೆಗಾಗಿ ವಿವಿಧೆಡೆ ಜನರು ನೂತನ ಪ್ರಯತ್ನ ಮಾಡುತ್ತಿರುವ ಕುರಿತು ವಿವರಣೆ.
* ಫ್ರಾನ್ಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು 100 ವರ್ಷಕ್ಕೂ ಹೆಚ್ಚು ವಯಸ್ಸಾದ ಯೋಗ ಶಿಕ್ಷಕಿ ಚಾರ್ಲೊಟ್ ಚಾಪಿನ್ ಅವರನ್ನು ಭೇಟಿಯಾದ ಕುರಿತು ಉಲ್ಲೇಖ.
* ಮಾದಕ ವಸ್ತು ಬಳಕೆ ವಿರೋಧಿ ಅಭಿಯಾನಗಳಲ್ಲಿ ಭಾಗಿಯಾದ ದೇಶದ 11 ಕೋಟಿಗೂ ಹೆಚ್ಚಿನ ಯುವ ಸಮೂಹಕ್ಕೆ, ₹ 12 ಸಾವಿರ ಕೋಟಿ ಮೌಲ್ಯದ 10 ಲಕ್ಷ ಕೆ.ಜಿ ಮಾದಕ ವಸ್ತು ನಾಶಪಡಿಸಿದ್ದಕ್ಕೆ ಶ್ಲಾಘನೆ.
ಬಿಚಾರ್ಪುರದ ಬದಲಾವಣೆಗೆ ಮೆಚ್ಚುಗೆ
ಮಧ್ಯಪ್ರದೇಶದ ಬಿಚಾರ್ಪುರ ಗ್ರಾಮದ ಕುರಿತು ಮನ್ ಕಿ ಬಾತ್ನಲ್ಲಿ ಮಾತನಾಡಿದ ಮೋದಿ, ‘ಮಾದಕ ವ್ಯಸನದ ಹಿಡಿತಕ್ಕೆ ಒಳಗಾಗಿದ್ದ ಗ್ರಾಮವೊಂದು ಈಗ ಫುಟ್ಬಾಲ್ ಕ್ರೀಡೆಯ ತಾಣವಾಗಿ, ‘ಪುಟ್ಟ ಬ್ರೆಜಿಲ್’ ಆಗಿ ಬದಲಾಗಿದೆ. ಈ ಮಹತ್ವದ ಬದಲಾವಣೆಗೆ ರಾಷ್ಟ್ರ ಮಟ್ಟದ ಕ್ರೀಡಾಪಟು ಹಾಗೂ ತರಬೇತುದಾರ ರಾಯೀಸ್ ಅಹ್ಮದ್ ಅವರು ಕಾರಣ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಸುಮ್ಮನೆ ಊಹೆ ಮಾಡಿಕೊಳ್ಳಿ. ಅಕ್ರಮ ಮಧ್ಯಕ್ಕೆ ಹೆಸರಾಗಿದ್ದ, ಮಾದಕ ವ್ಯಸನಕ್ಕೆ ಕುಖ್ಯಾತಿ ಪಡೆದಿದ್ದ ಈ ಬುಡಕಟ್ಟು ಗ್ರಾಮ ಇಂದು ದೇಶದ ಫುಟ್ಬಾಲ್ ಕ್ರೀಡೆಯ ತಾಣವಾಗಿದೆ. ಎಲ್ಲಿ ಸಂಕಲ್ಪವಿದೆಯೋ ಅಲ್ಲಿ ಮಾರ್ಗ ಇದೆ ಎಂದು ಇದಕ್ಕೆ ಹೇಳುವುದು’ ಎಂದು ಹೇಳಿದರು.
ಮೆಹರಂ ಇಲ್ಲದೆ ಹಜ್ ಯಾತ್ರೆ ಸುಮಾರು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ವರ್ಷ ‘ಮೆಹರಮ್ (ಪುರುಷ ಸಂಗಾತಿ ಅಥವಾ ಪುರುಷ ಸಹಚರ)’ ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಬಹುದೊಡ್ಡ ಪರಿವರ್ತನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಣ್ಣಿಸಿದ್ದಾರೆ. ಹಜ್ ನೀತಿಯಲ್ಲಿ ತಮ್ಮ ಸರ್ಕಾರವು ಮಾಡಿದ ಬದಲಾವಣೆಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಹಜ್ ಯಾತ್ರೆಗೆ ಹೋಗಲು ಅವಕಾಶ ಪಡೆಯುತ್ತಿದ್ದಾರೆ ಎಂದು ಹೇಳಿದರು. ‘ಈ ಬಾರಿ ಹಜ್ ಯಾತ್ರೆ ಕೈಗೊಂಡ ಮಹಿಳೆಯರ ಸಂಖ್ಯೆ 50 ಅಥವಾ 100 ಅಲ್ಲ 4 ಸಾವಿರಕ್ಕೂ ಹೆಚ್ಚು. ಯಾತ್ರೆಯಿಂದ ಮರಳಿದ ಮಹಿಳೆಯರಿಂದ ತಮಗೆ ಹೆಚ್ಚು ಪತ್ರಗಳು ಬಂದಿವೆ. ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ‘ಮೆಹರಂ’ ಇಲ್ಲದೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶವಿರಲಿಲ್ಲ. ಇದಕ್ಕೆ ಅವಕಾಶ ಕಲ್ಪಿಸಿದ ಸೌದಿ ಅರೆಬಿಯಾ ಸರ್ಕಾರಕ್ಕೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ’ ಎಂದೂ ಅವರು ಹೇಳಿದ್ದಾರೆ. ಹಜ್ ಯಾತ್ರೆ ವೇಳೆ ಪುರುಷ ಸಂಗಾತಿ ಜತೆಗಿರಬೇಕೆಂಬ ನಿಯಮ ಕಡ್ಡಾಯವಾಗಿತ್ತು. 2018ರಲ್ಲಿ ಈ ನಿಯಮ ತೆಗೆದು ಹಾಕಿದ ನಂತರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಪುರುಷ ಸಂಗಾತಿ ಇಲ್ಲದೇ ಈ ವರ್ಷ ಹಜ್ ಯಾತ್ರೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.