ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಆರ್‌ಪಿಎಫ್‌ ನೇಮಕಾತಿ ಪರೀಕ್ಷೆ: ತಮಿಳು ಭಾಷೆಗೆ ಅವಕಾಶ ಕೋರಿ ಸ್ಟಾಲಿನ್ ಪತ್ರ

Last Updated 9 ಏಪ್ರಿಲ್ 2023, 11:02 IST
ಅಕ್ಷರ ಗಾತ್ರ

ಚೆನ್ನೈ: ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ನೇಮಕಾತಿಗೆ ಸಂಬಂಧಿಸಿದಂತೆ ಭಾನುವಾರ ನಡೆಸಲಾದ ಕಂಪ್ಯೂಟರ್‌ ಪರೀಕ್ಷೆಯಲ್ಲಿ ತಮಿಳು ಭಾಷೆಗೆ ಅವಕಾಶ ನೀಡದಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ವಿರೋಧಿಸಿದ್ದಾರೆ.

‘ಉದ್ಯೋಗಾಕಾಂಕ್ಷಿಗಳು ತಮಿಳು ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಸ್ಟಾಲಿನ್‌ ಪತ್ರ ಬರೆದಿದ್ದಾರೆ.

‘ಪರೀಕ್ಷೆಯನ್ನು ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿ ಬರೆಯಬೇಕೆಂಬ ಕೇಂದ್ರದ ಅಧಿಸೂಚನೆಯಿಂದಾಗಿ ತಮಿಳುನಾಡಿನ ಅಭ್ಯರ್ಥಿಗಳು ತಮ್ಮ ಸ್ವಂತ ರಾಜ್ಯದಲ್ಲೇ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದಲ್ಲದೇ 100 ಪ್ರಶ್ನೆಗಳಲ್ಲಿ 25 ಪ್ರಶ್ನೆಗಳು ಹಿಂದಿ ಭಾಷೆಗೆ ಸಂಬಂಧಿಸಿದವುಗಳಾಗಿವೆ. ಪರೀಕ್ಷೆಯಲ್ಲಿ ಇಂಗ್ಲಿಷ್‌ ಅಥವಾ ಹಿಂದಿ ಭಾಷೆ ಕಡ್ಡಾಯಗೊಳಿಸಿರುವುದು ಏಕಪಕ್ಷೀಯ ಮಾತ್ರವಲ್ಲ, ತಾರತಮ್ಯವೂ ಹೌದು’ ಎಂದು ಸ್ಟಾಲಿನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ನಡೆಯು ಅಭ್ಯರ್ಥಿಗಳು ಸರ್ಕಾರಿ ಕೆಲಸದಿಂದ ವಂಚಿತರಾಗುವಂತೆ ಮಾಡುತ್ತದೆ ಹಾಗೂ ಪರೀಕ್ಷೆಯ ಅಧಿಸೂಚನೆಯು ಅಭ್ಯರ್ಥಿಗಳ ಸಾಂವಿಧಾನಿಕ ಹಕ್ಕಿಗೆ ವಿರುದ್ಧವಾಗಿದೆ. ಹಾಗಾಗಿ ಹಿಂದಿಯೇತರ ಅಭ್ಯರ್ಥಿಗಳು ತಮಿಳು ಸೇರಿದಂತೆ ತಮ್ಮ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡುವ ವಿಷಯದಲ್ಲಿ ಅಮಿತ್‌ ಶಾ ಮಧ್ಯಪ್ರವೇಶಿಸಬೇಕು’ ಎಂದೂ ಪತ್ರದಲ್ಲಿ ಕೋರಿದ್ದಾರೆ.

‘ಸಿಆರ್‌ಪಿಎಫ್‌ನಲ್ಲಿ ಖಾಲಿ ಇರುವ 9,212 ಹುದ್ದೆಗಳಿಗೆ ತಮಿಳುನಾಡಿನಿಂದ 579 ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಾಗಿತ್ತು. ಇದಕ್ಕಾಗಿ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿತ್ತು’ ಎಂದು ತಮಿಳುನಾಡು ಸರ್ಕಾರವು ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT