ನವದೆಹಲಿ: ‘ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ಹಿತಾಸಕ್ತಿ ಸಂರ್ಘದ ಯಾವೆಲ್ಲಾ ಸಂದರ್ಭಗಳಲ್ಲಿ ನಿರ್ಣಯ ತೆಗೆದುಕೊಳ್ಳುವುದರಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ನೀಡುವುದಕ್ಕೆ ಸಾಧ್ಯವಿಲ್ಲ’ ಎಂದು ಆರ್‌ಟಿಐ ಅರ್ಜಿಯೊಂದಕ್ಕೆ ಸೆಬಿ ನೀಡಿರುವ ಪ್ರತಿಕ್ರಿಯೆಗೆ ಕಾಂಗ್ರೆಸ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದೆ.
ಆರ್‌ಟಿಐ ಕಾರ್ಯಕರ್ತ ಲೋಕೇಶ್ ಭತ್ರಾ ಅವರು ಈ ಬಗ್ಗೆ ಸೆಬಿಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಮಾಧವಿ ತಮ್ಮ ಆಸ್ತಿಯ ಕುರಿತು ಕೇಂದ್ರ ಸರ್ಕಾರ ಹಾಗೂ ಸೆಬಿಗೆ ನೀಡಿರುವ ಮಾಹಿತಿಯನ್ನು ಹಾಗೂ ಇವುಗಳನ್ನು ನೀಡಿದ ದಿನಾಂಕದ ತಿಳಿಸುವಂತೆ ಅರ್ಜಿಯಲ್ಲಿ ಕೇಳಲಾಗಿತ್ತು. ಇವುಗಳನ್ನು ಬಹಿರಂಗಪಡಿಸಲು ಸೆಬಿ ನಿರಾಕರಿಸಿದೆ. ‘ಸೆಬಿಯ ಈ ಕ್ರಮವು, ಸಾರ್ವಜನಿಕ ಹೊಣೆಗಾರಿಕೆ ಹಾಗೂ ಪಾರದರ್ಶಕತೆಗೆ ಅಣಕ ಮಾಡಿದಂತಾಗಿದೆ’ ಎಂದು ಕಾಂಗ್ರೆಸ್ ಹೇಳಿದೆ.
‘ಹಿತಾಸಕ್ತಿ ಸಂಘರ್ಷದ ಯಾವೆಲ್ಲಾ ಸಂದರ್ಭದಲ್ಲಿ ಮಾಧವಿ ಅವರು ನಿರ್ಣಯ ಕೈಗೊಳ್ಳುವಾಗ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕುವುದಕ್ಕೆ ಸೆಬಿಯ ಸಂಪನ್ಮೂಲವು ವ್ಯರ್ಥವಾಗುತ್ತದೆ. ಜೊತೆಗೆ, ತಮ್ಮ ಆಸ್ತಿಯ ಕುರಿತು ಮಾಧವಿ ಅವರು ನೀಡಿರುವ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದರಿಂದ ಮಾಧವಿ ಅವರ ‘ವೈಯಕ್ತಿಕ ಮಾಹಿತಿ’ಯನ್ನು ಬಹಿರಂಗ ಮಾಡಿದಂತಾಗುತ್ತದೆ. ಜೊತೆಗೆ, ಅವರ ಈ ಮಾಹಿತಿಗಳನ್ನು ಬಹಿರಂಗ ಮಾಡುವುದರಿಂದ ಅವರ ಜೀವಕ್ಕೂ ಆಪತ್ತು ತಂದಂತಾಗುತ್ತದೆ’ ಎಂದು ಆರ್‌ಟಿಐ ಅರ್ಜಿಗೆ ಸೆಬಿಯು ಶುಕ್ರವಾರ ಉತ್ತರ ನೀಡಿತ್ತು.
‘ಸೆಬಿ ಅಧ್ಯಕ್ಷೆ ಮಾಧವಿ ಅವರು ತಮ್ಮ ಬಳಿ ಇರುವ ಪೇರುಗಳು ಹಾಗೂ ಸಾಲಪತ್ರಗಳ ಕುರಿತು ಕಾಲ ಕಾಲಕ್ಕೆ ಮಾಹಿತಿ ನೀಡಿದ್ದಾರೆ. ಆದ್ದರಿಂದ, ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) (g), ಸೆಕ್ಷನ್ 8 (1) (j) ಹಾಗೂ ಸೆಕ್ಷನ್ 7 (9)ರ ಅನ್ವಯ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಸೆಬಿ ಹೇಳಿತ್ತು.
ಮಾಧವಿ ಅವರ ಹಿತಾಸಕ್ತಿ ಸಂರ್ಘದ ಕುರಿತು ಬಹಿರಂಗಗೊಂಡ ಮಾಹಿತಿಗಳೇ ಆಘಾತಕಾರಿಯಾಗಿದ್ದವು. ಆರ್‌ಟಿಐ ಅರ್ಜಿಯೊಂದಕ್ಕೆ ಸೆಬಿ ನೀಡಿರುವ ಉತ್ತರವು ಈಗ ಬೆಂಕಿಗೆ ತುಪ್ಪು ಸುರಿಯುವಂತಿದೆಜೈರಾಮ್ ರಮೇಶ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.