ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುದ್ದು ಹಾಜರಿಗೆ ವಿನಾಯ್ತಿ ಕೇಳಿದ್ದ ಕೇಜ್ರಿವಾಲ್ ಮನವಿ ತಿರಸ್ಕರಿಸಿದ ನ್ಯಾಯಾಲಯ

Published 14 ಸೆಪ್ಟೆಂಬರ್ 2023, 10:07 IST
Last Updated 14 ಸೆಪ್ಟೆಂಬರ್ 2023, 10:07 IST
ಅಕ್ಷರ ಗಾತ್ರ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಗುಜರಾತ್‌ ವಿಶ್ವವಿದ್ಯಾಲಯ ದಾಖಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಖುದ್ದು ಹಾಜರಿಗೆ ರಿಯಾಯಿತಿ ಕೋರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 8ರಂದು ನ್ಯಾಯಾಲಯ ವಿಚಾರಣೆಯನ್ನು ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು. 

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದಂತೆ ಎಎಪಿಯ ಇಬ್ಬರು ಮುಖಂಡರ ಹೇಳಿಕೆ ಕುರಿತಂತೆ ದೂರು ನೀಡಿದ್ದ ವಿಶ್ವವಿದ್ಯಾಲಯದ ಕುಲಸಚಿವ ಪೀಯೂಷ್ ಎಂ. ಪಟೇಲ್ ಅವರು, ಇದೊಂದು ವ್ಯಂಗ್ಯ ಮತ್ತು ಅವಹೇಳನಕಾರಿ ಹೇಳಿಕೆಯಾಗಿದೆ ಎಂದು ಆರೋಪಿಸಿದ್ದರು. ಜತೆಗೆ ಈ ಇಬ್ಬರೂ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತಂದಿದೆ’ ಎಂದು ದೂರಿದ್ದರು.

ದೂರಿನ ಅನ್ವಯ ನ್ಯಾಯಾಲಯವು ಈ ಇಬ್ಬರಿಗೆ ಖುದ್ದು ಹಾಜರಿಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಕಾನೂನಿನ ಅಡಿಯಲ್ಲಿ ಸ್ಥಾಪನೆಗೊಂಡಿರುವ ಸರ್ಕಾರಿ ಸಂಸ್ಥೆಯಾದ ಗುಜರಾತ್ ವಿಶ್ವವಿದ್ಯಾಲವು ಸರ್ಕಾರಿ ವ್ಯವಸ್ಥೆಯಲ್ಲಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಬಾರದು. ಸಂವಿಧಾನದ 20 ಹಾಗೂ 21ನೇ ವಿಧಿಯಂತೆ ಮತ್ತು ಗುಜರಾತ್ ವಿಶ್ವವಿದ್ಯಾಲಯದ ಕಾಯ್ದೆಯಂತೆ ದೂರು ನೀಡಲು ಸಾಧ್ಯವಿಲ್ಲ ಎಂದು ಅರವಿಂದ ಕೇಜ್ರಿವಾಲ್ ಪರ ವಕೀಲ ಓಂ ಕೊತ್ವಾಲ್ ವಾದ ಮಂಡಿಸಿದ್ದರು. ಆದರೆ ನ್ಯಾಯಾಲಯ ಇದನ್ನು ಮಾನ್ಯ ಮಾಡಲಿಲ್ಲ.

ನರೇಂದ್ರ ಮೋದಿ ಅವರಿಗೆ ಗುಜರಾತ್ ವಿಶ್ವವಿದ್ಯಾಲಯ ನೀಡಿದ್ದ ಸ್ನಾತಕೋತ್ತರ ಪದವಿಯ ಸಾಚಾತನ ಕುರಿತು ಕಳೆದ ಏ. 1ಹಾಗೂ 2ರಂದು ಎಎಪಿಯ ಈ ಇಬ್ಬರು ನಾಯಕರು ಹೇಳಿಕೆ ನೀಡಿದ್ದರು. ಒಂದೊಮ್ಮೆ ವಿಶ್ವವಿದ್ಯಾಲಯದಲ್ಲಿ ಪದವಿ ನೀಡುವುದೇ ಆದರೆ, ಅದನ್ನು ಈವರೆಗೂ ಕೊಟ್ಟಿಲ್ಲವೇಕೆ? ಗುಜರಾತ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯಗಳು ಏಕೆ ಪದವಿಯನ್ನು ನೀಡುತ್ತಿಲ್ಲ. ಈ ಕುರಿತಂತೆ ಮಾಹಿತಿಯನ್ನೂ ನೀಡುತ್ತಿಲ್ಲ. ಪದವಿ ಪ್ರಮಾಣಪತ್ರ ಏಕೆ ನೀಡುತ್ತಿಲ್ಲವೆಂದರೆ, ಅವು ನಕಲಿಯಾಗಿರುವ ಸಾಧ್ಯತೆಯೂ ಇದೆ. ಒಂದೊಮ್ಮೆ ಗುಜರಾತ್ ವಿಶ್ವವಿದ್ಯಾಲಯಲ್ಲಿ ನರೇಂದ್ರ ಮೋದಿ ಅವರು ಓದಿದ್ದರೆ, ಆ ವಿಶ್ವವಿದ್ಯಾಲಯವು ತನ್ನ ಒಬ್ಬ ವಿದ್ಯಾರ್ಥಿ ಪ್ರಧಾನಿ ಹುದ್ದೆ ಹೊಂದಿದ್ದಾರೆ ಎಂದು ಸಂಭ್ರಮಿಸಬೇಕಿತ್ತು. ಆದರೆ ವಿಶ್ವವಿದ್ಯಾಲಯವು ಪದವಿ ನೀಡಿದ್ದನ್ನು ಮುಚ್ಚಿಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದರು.

ಕೇಜ್ರಿವಾಲ್‌ ಮನವಿಯನ್ನು ತಿರಸ್ಕರಿಸಿರುವುದರ ಜತೆಗೆ, ಅವರಿಗೆ ₹25 ಸಾವಿರ ದಂಡವನ್ನೂ ನ್ಯಾಯಾಲಯ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT