ನವದೆಹಲಿ: ಅಹಮದಾಬಾದ್‌ನ ಪಿಎಂಎಲ್‌ಎ ವಿಶೇಷ ನ್ಯಾಯಾಲಯವು ಟಿಎಂಸಿ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಅವರ ವಿರುದ್ಧ ದೋಷಾರೋಪ ನಿಗದಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.
ಹಣದ ಅಕ್ರಮ ವರ್ಗಾವಣೆ ಪ್ರಕರಣಗಳ ವಿಚಾರಣೆಯನ್ನು ಈ ನ್ಯಾಯಾಲಯ ನಡೆಸುತ್ತದೆ. ಗೋಖಲೆ ಅವರು ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಅದನ್ನು ಆಧರಿಸಿ ಗೋಖಲೆ ವಿರುದ್ಧ ತನಿಖೆ ನಡೆಸಲಾಗಿತ್ತು.
ಗೋಖಲೆ ಅವರು ಟಿಎಂಸಿ ಪಕ್ಷದ ರಾಷ್ಟ್ರೀಯ ವಕ್ತಾರ ಕೂಡ ಹೌದು. ಗೋಖಲೆ ವಿರುದ್ಧ ಕಳೆದ ವರ್ಷ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಭಾರಿ ಮೊತ್ತವನ್ನು ಷೇರು ವಹಿವಾಟುಗಳಿಗೆ, ಊಟಕ್ಕೆ ಹಾಗೂ ವೈಯಕ್ತಿಕವಾಗಿ ಇತರ ವೆಚ್ಚಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದರು. ಆರೋಪಗಳನ್ನು ಗೋಖಲೆ ಅವರು ನಿರಾಕರಿಸಿದ್ದಾರೆ.