ರಬತ್: ಇಸ್ರೇಲ್‌ನೊಂದಿಗಿನ ದೇಶದ ಸಂಬಂಧವನ್ನು ಸುಧಾರಿಸುವ ಕುರಿತಾದ ಬಗ್ಗೆ ಫೇಸ್‌ಬುಕ್‌ನಲ್ಲಿ ರಾಜನನ್ನು ಟೀಕಿಸಿದ್ದಕ್ಕಾಗಿ ಮೊರೊಕ್ಕೊ ವ್ಯಕ್ತಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
‘ರಾಜನ ಟೀಕೆ ಎಂದು ಅರ್ಥೈಸಬಹುದಾದ ರೀತಿಯಲ್ಲಿ ಇಸ್ರೇಲ್ ಜೊತೆಗಿನ ಸಂಬಂಧ ಸುಧಾರಣೆ ನಿರ್ಧಾರವನ್ನು ಖಂಡಿಸಿದ ಪೋಸ್ಟ್‌ಗಾಗಿ 48 ವರ್ಷದ ಬೌಕಿಯೌಡ್ ಅವರನ್ನು ಸೋಮವಾರ ಜೈಲಿಗೆ ಹಾಕಲಾಗಿದೆ’ ಎಂದು ವಕೀಲ ಎಲ್ ಹಸನ್ ಎಸ್ಸೌನಿ ಹೇಳಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
2020ರ ಡಿಸೆಂಬರ್‌ನಲ್ಲಿ ಅಮೆರಿಕ ಬೆಂಬಲಿತ ಅಬ್ರಹಾಂ ಒಪ್ಪಂದಗಳ ಭಾಗವಾಗಿ ಮೊರಕ್ಕೊ ಮತ್ತು ಇಸ್ರೇಲ್ ದೇಶಗಳು ದ್ವೇಷ ಬದಿಗೊತ್ತಿ ಸಂಬಂಧ ಸುಧಾರಣೆಗೆ ಒಪ್ಪಿಗೆ ಸೂಚಿಸಿದ್ದವು.
ದೇಶದ ಸಂವಿಧಾನದ ಪ್ರಕಾರ, ವಿದೇಶಾಂಗ ವ್ಯವಹಾರಗಳಲ್ಲಿ ನಿರ್ಧಾರ ಕೈಗೊಳ್ಳುವುದು ದೊರೆ 6ನೇ ಮೊಹಮ್ಮದ್ ಅವರ ವಿಶೇಷ ಅಧಿಕಾರವಾಗಿದೆ.
ಈ ಕುರಿತಂತೆ, ಕಾಸಾಬ್ಲಾಂಕಾ ನ್ಯಾಯಾಲಯದ ತೀರ್ಪು ‘ಕಠಿಣ ಮತ್ತು ಸ್ವೀಕಾರಾರ್ಹವಲ್ಲ’ ಎಂದು ವಕೀಲರು ಹೇಳಿದ್ದಾರೆ.
ಇಸ್ರೇಲ್‌ನೊಂದಿಗಿನ ಸಂಬಂಧ ಸುಧಾರಣೆಯನ್ನು ಮಾತ್ರ ನನ್ನ ಕಕ್ಷಿದಾರ ವಿರೋಧಿಸಿದ್ದರೇ ಹೊರತು ರಾಜನನ್ನು ನಿಂದಿಸುವ ಉದ್ದೇಶವಿರಲಿಲ್ಲ ಎಂದು ವಕೀಲರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.