ಭೋಪಾಲ್ (ಪಿಟಿಐ): ಮಹಿಳೆಯರಿಗಾಗಿ ಶ್ರಾವಣ ಮಾಸದ ಕೊಡುಗೆ ಘೋಷಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಲಾಡ್ಲಿ ಬೆಹನಾ ಯೋಜನೆ ಅಡಿ ಮಹಿಳೆಯರಿಗೆ ನೀಡುವ ಹಣಕಾಸು ನೆರವನ್ನು ಹೆಚ್ಚಿಸಿದ್ದಾರೆ. ಅದರಂತೆ ₹1,000 ಹಣಕಾಸು ನೆರವನ್ನು ಈ ತಿಂಗಳು 1,250ಕ್ಕೆ ಹೆಚ್ಚಿಸಲಾಗಿದೆ.
ಇದಲ್ಲದೇ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಈಗಿರುವ ಶೇ 30 ಮೀಸಲಾತಿಯನ್ನು ಶೇ 35ಕ್ಕೆ ಏರಿಸುವುದಾಗಿ ಮತ್ತು ₹450 ಸಬ್ಸಿಡಿ ದರದಲ್ಲಿ ಅಡುಗೆ ಅನಿಲದ ಸಿಲಿಂಡರ್ ಒದಗಿಸುವುದಾಗಿಯೂ ಅವರು ಹೇಳಿದ್ದಾರೆ.
ಶ್ರಾವಣ ಮಾಸದ ಅಂಗವಾಗಿ ನೀಡಲಾಗಿರುವ ಈ ವಿಶೇಷ ಕೊಡುಗೆಗಳನ್ನು ಮುಂದುವರೆಸುವ ಸಲುವಾಗಿ ನಂತರದ ದಿನಗಳಲ್ಲಿ ಕಾಯಂ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ರಾಖಿ ಹಬ್ಬದ ಸಲುವಾಗಿ ಸದ್ಯ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ₹250 ವರ್ಗಾಯಿಸಲಾಗಿದೆ. ಬಾಕಿ ₹1,000ವನ್ನು ಸೆಪ್ಟೆಂಬರ್ ತಿಂಗಳಲ್ಲಿ ನೀಡಲಾಗುವುದು. ಅಕ್ಟೋಬರ್ ತಿಂಗಳಿನಿಂದ ರಾಜ್ಯದ 1.25 ಕೋಟಿ ಮಹಿಳೆಯರು ತಿಂಗಳಿಗೆ ₹1,250 ಪಡೆಯುವರು, ನಂತರ ದಿನಗಳಲ್ಲಿ ಆ ಮೊತ್ತವನ್ನು ₹3,000ಕ್ಕೆ ಏರಿಸಲಾಗುವುದು ಎಂದು ಚೌಹಾಣ್ ಹೇಳಿದ್ದಾರೆ.
ಈ ವರ್ಷಾಂತ್ಯಕ್ಕೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹೊಸದಾಗಿ ಮತ ಚಲಾಯಿಸುತ್ತಿರುವ 13.39 ಲಕ್ಷ ಮತದಾರರಲ್ಲಿ 7.07 ಲಕ್ಷ ಮಹಿಳೆಯರಿದ್ದಾರೆ. ಮಹಿಳೆಯರ ಮತಗಳನ್ನು ಸೆಳೆಯಲು ಈ ಘೋಷಣೆಗಳನ್ನು ಮಾಡಲಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.