ಜೈಪುರ: 1966ರಲ್ಲಿ ರಾಜೇಶ್ ಪೈಲಟ್ ಮಿಜೊರಾಂ ರಾಜಧಾನಿ ಐಜ್ವಾಲ್ ಮೇಲೆ ಬಾಂಬ್ ಎಸೆದಿದ್ದರು ಎಂಬ ಬಿಜೆಪಿ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ನನ್ನ ತಂದೆ ವಿಚಾರವಾಗಿ ನೀವು ತಪ್ಪು ಮಾಹಿತಿ ಹಂಚಿಕೊಂಡಿದ್ದೀರಿ ಎಂದು ಹೇಳಿದ್ದಾರೆ.
‘ಮಾರ್ಚ್ 5, 1966ರಂದು ಮಿಜೊರಾಂನ ರಾಜಧಾನಿ ಐಜ್ವಾಲ್‌ನಲ್ಲಿ ವಾಯುಪಡೆ ನಡೆಸಿದ ಬಾಂಬ್ ದಾಳಿಯಲ್ಲಿ ರಾಜೇಶ್ ಪೈಲಟ್ ಮತ್ತು ಸುರೇಶ್ ಕಲ್ಮಾಡಿ ಅವರ ಪಾತ್ರವೂ ಇದೆ. ಅಂದು ವಾಯುಪಡೆಯ ವಿಮಾನವನ್ನು ಅವರಿಬ್ಬರು ನಡೆಸುತ್ತಿದ್ದರು. ಇದಾದ ಬಳಿಕ ಇಬ್ಬರಿಗೂ ಕಾಂಗ್ರೆಸ್ ಟಿಕೆಟ್ ನೀಡಿತ್ತು. ತಮ್ಮದೇ ಜನರ ಮೇಲೆ ದಾಳಿ ನಡೆಸಿದವರಿಗೆ ಇಂದಿರಾ ಗಾಂಧಿ ಅವರು ಹೇಗೆ ಗೌರವ ನೀಡಿದರು ಎಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆ’ ಎಂದು ಅಮಿತ್ ಮಾಳವೀಯ ಟ್ವಿಟರ್‌ನಲ್ಲಿ(ಎಕ್ಸ್) ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿನ್ ಪೈಲಟ್, ‘ನನ್ನ ತಂದೆ ಬಾಂಬ್ ಎಸೆದಿರುವುದು ಹೌದು. ಆದರೆ ಅದು ಮಿಜೊರಾಂ ಮೇಲಲ್ಲ’ ಎಂದಿದ್ದಾರೆ.
‘ನನ್ನ ತಂದೆ ವಾಯುಪಡೆಗೆ ಸೇರಿಕೊಂಡಿದ್ದು 29 ಅಕ್ಟೋಬರ್ 1966(ಪ್ರಮಾಣ ಪತ್ರ ಲಗತ್ತಿಸಿದ್ದೇನೆ). ಮಿಜೊರಾಂನ ದಾಳಿ(ಮಾರ್ಚ್ 5, 1966) ಸಂದರ್ಭ ನನ್ನ ತಂದೆ ವಾಯುಪಡೆಯಲ್ಲಿಯೇ ಇರಲಿಲ್ಲ. ಹೌದು ನನ್ನ ತಂದೆ ಬಾಂಬ್ ದಾಳಿ ನಡೆಸಿದ್ದಾರೆ. ಅದು ಪೂರ್ವ ಪಾಕಿಸ್ತಾನದ ಮೇಲೆ. 1971ರ ಇಂಡೋ–ಪಾಕಿಸ್ತಾನದ ಯುದ್ಧದ ಸಂದರ್ಭ. ನೀವು ತಪ್ಪು ಮಾಹಿತಿ ಹಂಚಿಕೊಂಡಿದ್ದೀರಿ. ಜೈ ಹಿಂದ್ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.