ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಚಂದ್ರಬಾಬು ನಾಯ್ಡು

Published 23 ಸೆಪ್ಟೆಂಬರ್ 2023, 10:33 IST
Last Updated 23 ಸೆಪ್ಟೆಂಬರ್ 2023, 10:33 IST
ಅಕ್ಷರ ಗಾತ್ರ

ನವದೆಹಲಿ: ಆಂಧ್ರಪ್ರದೇಶದ ಕೌಶಲ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಇಂದು (ಶನಿವಾರ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ್ದ ಆಂಧ್ರಪ್ರದೇಶ ಹೈಕೋರ್ಟ್, ಚಂದ್ರಬಾಬು ನಾಯ್ಡು ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಜತೆಗೆ, ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ನ್ಯಾಯಾಲಯವು, ನಾಯ್ಡು ಅವರನ್ನು ಎರಡು ದಿನ ಸಿಐಡಿ ವಶಕ್ಕೆ ಒಪ್ಪಿಸಿ, ಆದೇಶ ಹೊರಡಿಸಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ್ದ ಎಸಿಬಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜಿ. ಹಿಮಬಿಂದು ಅವರು, ನಾಯ್ಡು ಅವರನ್ನು ಎರಡು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಲಾಗಿದ್ದು, ರಾಜಮಹೇಂದ್ರವರಂ ಕೇಂದ್ರೀಯ ಕಾರಾಗೃಹದಲ್ಲಿ ಅವರನ್ನು ಬೆಳಿಗ್ಗೆ 9.30ರಿಂದ ಸಂಜೆ ಐದು ಗಂಟೆವರೆಗೆ ಸಿಐಡಿ ವಿಚಾರಣೆ ನಡೆಸಲಿದೆ ಎಂದು ಹೇಳಿದ್ದರು.

ಅಲ್ಲದೆ, ನಾಯ್ಡು ವಿಚಾರಣೆ ಪೂರ್ಣವಾದ ಬಳಿಕ ಅವರನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು. ಈ ವಿಚಾರಣೆಯ ವಿಸ್ತೃತ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ಪ್ರಕರಣದ ತನಿಖಾಧಿಕಾರಿಗಳು, ವಿಡಿಯೊ ಮತ್ತು ಫೋಟೊಗಳನ್ನು ಬಹಿರಂಗಪಡಿಸಬಾರದು ಎಂದು ಸಿಐಡಿ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತ್ತು.

ಕೌಶಲ ಅಭಿವೃದ್ಧಿ ನಿಗಮದ ಹಣ ದುರ್ಬಳಕೆಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹300 ಕೋಟಿಗೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದ್ದು, ಈ ಪ್ರಕರಣ ಸಂಬಂಧ ಸೆ.9ರಂದು ನಾಯ್ಡು ಅವರನ್ನು ಬಂಧಿಸಲಾಗಿದೆ.

ಜೈಲಿನಲ್ಲೇ ವಿಚಾರಣೆ

ಆಂಧ್ರಪ್ರದೇಶದ ಕೌಶಲ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರ ವಿಚಾರಣೆಯನ್ನು ಅಪರಾಧ ತನಿಖಾ ದಳ (ಸಿಐಡಿ) ಶನಿವಾರ ಜೈಲಿನಲ್ಲೇ ಆರಂಭಿಸಿದೆ.

ನಾಯ್ಡು ಪರ ವಕೀಲ ಡಿ.ಶ್ರೀನಿವಾಸ್‌ ಅವರ ಉಪಸ್ಥಿತಿಯಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 5ರ ವರೆಗೆ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ. ಅಷ್ಟಲ್ಲದೆ ವಿಚಾರಣೆ ಸಂದರ್ಭದ ವಿಡಿಯೊ ಮತ್ತು ಫೋಟೊಗಳನ್ನು ಬಹಿರಂಗಪಡಿಸದಂತೆಯೂ ನಿರ್ದೇಶನ ನೀಡಿದೆ.

ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥರೂ ಆಗಿರುವ ನಾಯ್ಡು ಅವರು ಸದ್ಯ ರಾಜಮಹೇಂದ್ರವರಂ ಕೇಂದ್ರೀಯ ಕಾರಾಗೃಹದಲ್ಲಿದ್ದಾರೆ. 12 ಅಧಿಕಾರಿಗಳನ್ನೊಳಗೊಂಡ ಸಿಐಡಿ ತಂಡ ಜೈಲಿನಲ್ಲೇ ಬೆಳಿಗ್ಗೆ 9.30ಕ್ಕೆ ವಿಚಾರಣೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT