ಪ್ರಭುತ್ವ (ಸ್ಟೇಟ್), ನಾಗರಿಕರು, ಮಾರುಕಟ್ಟೆ– ಇವು ಒಂದು ದೇಶದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ತ್ರಿಕೋನ ಇದ್ದಂತೆ. ಪ್ರಭುತ್ವ ಹಾಗೂ ಮಾರುಕಟ್ಟೆ, ನಾಗರಿಕರ ಆರ್ಥಿಕ ಚಟುವಟಿಕೆಗಳ ವರ್ತನೆಯನ್ನು ಪ್ರತಿಕ್ಷಣವೂ ಪ್ರಭಾವಿಸುತ್ತಿರುತ್ತವೆ. ಅಂತೆಯೇ ನಾಗರಿಕರ ರಾಜಕೀಯ ಹಾಗೂ ಸಾಮಾಜಿಕ ನಿಲುವುಗಳು, ಉನ್ಮಾದಗಳು ಕೂಡ ಮಾರುಕಟ್ಟೆ ಮತ್ತು ಪ್ರಭುತ್ವವನ್ನು ಪ್ರಭಾವಿಸುತ್ತಿರುತ್ತವೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಮಿತವ್ಯಯಕ್ಕೆ ಕರೆ ಕೊಟ್ಟಿರುವುದು ಹೇಗಿದೆಯೆಂದರೆ, ನಾಗರಿಕರ ಸಾಮಾನ್ಯ ಆರ್ಥಿಕ ವರ್ತನೆಗಳನ್ನು ರಾಷ್ಟ್ರೀಯತೆಯ ಪ್ರಭಾವದ ನಾಗರಿಕ ವರ್ತನೆಯಾಗಿ ಪರಿವರ್ತನೆ ಮಾಡಿಕೊಳ್ಳಿ ಎಂದು ವಿನಂತಿ ರೂಪದಲ್ಲಿ ಒತ್ತಾಯ ಮಾಡಿದಂತಿದೆ. ಇಂತಹ ನಾಗರಿಕ ವರ್ತನೆಗಳ ಬದಲಾವಣೆಯನ್ನು ಮೋದಿಯವರು ಕಳೆದ ಹನ್ನೆರಡು ವರ್ಷಗಳಲ್ಲಿ ನಾಲ್ಕು ಬಾರಿ ಮಾಡಿದ್ದಾರೆ. ಆದರೆ, ನಾಗರಿಕರು ಪ್ರತಿಬಾರಿಯೂ ಮಾಡಿದ ಇಂತಹ ತ್ಯಾಗಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ ಎನ್ನುವ ಸತ್ಯವನ್ನು ನೆನಪಿಸಿಕೊಳ್ಳಬೇಕಿದೆ.

ಮೋದಿ ಅವರು ವಿನಂತಿ ರೂಪದ ಒತ್ತಾಯವನ್ನು 2016ರ ಮೇನಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ನೆಪದಲ್ಲಿ ದೇಶದ ನಾಗರಿಕರ ಮುಂದಿರಿಸಿದ್ದರು. ಪಿಎಂಯುವೈ ಅಡಿ ಹೆಚ್ಚು ಮಂದಿಗೆ ನೆರವು ನೀಡಲು ದೇಶದ ಶ್ರೀಮಂತರು ಮತ್ತು ಮಧ್ಯಮ ವರ್ಗದವರು ಅಡುಗೆ ಅನಿಲದ ಸಬ್ಸಿಡಿಯನ್ನು ಬಿಟ್ಟುಕೊಡಿ ಎಂದು ಮೋದಿಯವರು ಮನವಿ ಮಾಡಿದಾಗ ಅದಕ್ಕೆ ಸ್ಪಂದಿಸಿ ಸುಮಾರು ಒಂದು ಕೋಟಿ ನಾಗರಿಕರು ತಮ್ಮ ಆರ್ಥಿಕ ವರ್ತನೆಯನ್ನು ಬದಲಾಯಿಸಿಕೊಂಡರು. ಆದರೆ, ಆ ಯೋಜನೆಯು ಯಶಸ್ವಿಯಾಯಿತೇ ಎಂದು ಹತ್ತು ವರ್ಷಗಳ ನಂತರ ಪರಿಶೀಲಿಸಿದರೆ, ಅಂಕಿಅಂಶಗಳು ನಿರಾಸೆಯನ್ನುಂಟುಮಾಡುತ್ತವೆ.

2016ರ ನವೆಂಬರ್ 8ರಂದು ಮೋದಿ ನೇತೃತ್ವದ ಸರ್ಕಾರವು ಕೈಗೊಂಡ ನೋಟು ರದ್ದತಿಯೆಂಬ ಮತ್ತೊಂದು ಅಸ್ತ್ರ ಕೇವಲ ನಾಗರಿಕರ ಆರ್ಥಿಕ ವರ್ತನೆಗಳ ಮೇಲೆ ನಡೆಸಿದ ದಾಳಿ ಮಾತ್ರ ಆಗಿರಲಿಲ್ಲ; ಅದು ನಾಗರಿಕರ ಆರ್ಥಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ನಡೆಸಿದ ದಾಳಿಯೂ ಆಗಿತ್ತು. ಆಗಲೂ ಮೋದಿಯವರು ನೂರು ದಿನಗಳ ಮಟ್ಟಿಗೆ ತ್ಯಾಗ ಮಾಡಲು ನಾಗರಿಕರಲ್ಲಿ ಮನವಿ ಮಾಡಿದ್ದರು. ದೇಶದ ಜನರು ಅದರಿಂದ ನೂರಾರು ಬಗೆಯ ಕಷ್ಟಗಳನ್ನು ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಬೇಕು.

2017 ಜೂನ್ 30ರ ಮಧ್ಯರಾತ್ರಿಯಲ್ಲಿ ಮೋದಿ ಸರ್ಕಾರವು ಸಂವಿಧಾನಕ್ಕೆ 101ನೇ ತಿದ್ದುಪಡಿ ತರುವ ಮುಖಾಂತರ ಮಗದೊಂದು ಅಸ್ತ್ರವನ್ನು ನಾಗರಿಕರ ಮೇಲೆ ಪ್ರಯೋಗಿಸಿತು. ಈ ತಿದ್ದುಪಡಿಯ ಮೂಲಕ ಜಾರಿಗೊಳಿಸಿದ ಜಿಎಸ್ಟಿ ವ್ಯವಸ್ಥೆಯನ್ನು ಸ್ವತಃ ಮೋದಿಯವರು ಎರಡನೇ ಬಾರಿಗೆ ಸ್ವಾತಂತ್ರ್ಯ ಪಡೆದಿದ್ದೇವೆ ಎನ್ನುವ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದರು. ಆದರೆ, ಜಿಎಸ್ಟಿ ವ್ಯವಸ್ಥೆಯು ಒಕ್ಕೂಟದ ಆರ್ಥಿಕ ವ್ಯವಸ್ಥೆಯನ್ನು ‘ಒಂದು ದೇಶ, ಒಂದು ತೆರಿಗೆ’ ಎನ್ನುವ ಘೋಷಣೆ ಅಡಿಯಲ್ಲಿ ಅತಿಯಾದ ಕೇಂದ್ರೀಕರಣದಡಿ ಸಿಲುಕಿಸಿತು. ದೇಶದ ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಆರ್ಥಿಕ ಸಾರ್ವಭೌಮತೆಯನ್ನು ಸಂಪೂರ್ಣವಾಗಿ ಕಳೆದುಕೊಂಡವು. ದೇಶದ ಸಣ್ಣ, ಮಧ್ಯಮ ಗಾತ್ರದ ಉದ್ದಿಮೆಗಳು ನೋಟು ರದ್ದತಿ ಮತ್ತು ಜಿಎಸ್ಟಿ ದೆಸೆಯಿಂದ ಸಂಪೂರ್ಣವಾಗಿ ನೆಲಕಚ್ಚಿದವು. ಅಭಿವೃದ್ಧಿ ಹೊಂದಿದ ಆರ್ಥಿಕತೆಯಲ್ಲಿ ಯಾವಾಗಲೂ ಕಾರ್ಪೊರೇಟ್ ಮತ್ತು ನೇರ ತೆರಿಗೆಯಿಂದ ಹೆಚ್ಚಿನ ಆದಾಯವನ್ನು ಸರ್ಕಾರಗಳು ಪಡೆಯುತ್ತವೆ. ಆದರೆ ಜಿಎಸ್ಟಿ ಮುಖಾಂತರ ಪ್ರಭುತ್ವ ತಂದ ಪರೋಕ್ಷ ತೆರಿಗೆಯು ನಾಗರಿಕರ ಮೇಲೆ ಈಗಲೂ ತೆರಿಗೆ ಭಯೋತ್ಪಾದನೆಯನ್ನು ಮುಂದುವರಿಸುತ್ತಿದೆ. ಇದುವರೆಗೆ ಮೋದಿ ಅವರು ನಾಗರಿಕ ವರ್ತನೆಗಳ ಬದಲಾವಣೆಗೆ ವಿನಂತಿ ಮಾಡುವ ಮೂಲಕ ಜಾರಿಗೊಳಿಸಿದ ಕಾನೂನುಗಳು ದೇಶದ ಕೋಟ್ಯಂತರ ಬಡಜನರಿಗೆ ನಿರೀಕ್ಷಿತ ಫಲವನ್ನು ನೀಡಿಲ್ಲವೆಂದು ಹೇಳಬಹುದು.

2020ರ ಮಾರ್ಚ್ 24ರಂದು ಕೋವಿಡ್ ಕಾರಣಕ್ಕೆ ಮೋದಿ ಅವರು ನಾಗರಿಕರಲ್ಲಿ ಲಾಕ್ಡೌನ್ಗೆ ಮನವಿ ಮಾಡಿದರು. ಲಾಕ್ಡೌನ್ನಿಂದ ಕೋಟ್ಯಂತರ ಜನರು ಅನುಭವಿಸಿದ ಸಾವು–ನೋವು ಸಂಕಷ್ಟಗಳನ್ನು ಭಾರತೀಯರು ಮರೆಯಲಾಗದು. ಇಂತಹ ಸಂಕಷ್ಟದ ಸಂದರ್ಭದಲ್ಲಿ ದೇಶದ ಶೇ 24ರಷ್ಟು ಜನರ ತಿಂಗಳ ಆದಾಯ ಇದ್ದದ್ದು ₹3,000 ಮಾತ್ರ. ಇದೇ ವೇಳೆ, ದೇಶದ ನೂರು ಶತಕೋಟ್ಯಧೀಶರ ಸಂಪತ್ತು ₹12,97,822 ಕೋಟಿ ಹೆಚ್ಚಾಗಿತ್ತು. ಇಂತಹ ಘೋರ ಆರ್ಥಿಕ ಅಸಮಾನತೆಯ ಹೆಚ್ಚಳದ ಹೊಣೆಗಾರಿಕೆಯನ್ನು ಮೋದಿ ಅವರಲ್ಲದೇ ಮತ್ಯಾರು ಹೊರಬೇಕು?

ವರ್ತಮಾನದ ರಾಜಕೀಯ ಹಾಗೂ ಆರ್ಥಿಕ ತಲ್ಲಣಗಳನ್ನು ಸರಿಯಾಗಿ ಗ್ರಹಿಸುವಲ್ಲಿ ಈಗಾಗಲೇ ನಾಲ್ಕು ಬಾರಿ ಸೋತಿರುವ ಮೋದಿಯವರು ಇದೀಗ ಐದನೇ ಬಾರಿ ನಾಗರಿಕರಿಗೆ ತಮ್ಮ ಆರ್ಥಿಕ ವರ್ತನೆಗಳನ್ನು ಬದಲಾಯಿಸಿಕೊಳ್ಳುವಂತೆ ವಿನಂತಿ ರೂಪದ ಒತ್ತಾಯವನ್ನು ಮಾಡಿದ್ದಾರೆ. ಈ ಬಾರಿಯೂ ವರ್ತಮಾನದ ವಿದೇಶಾಂಗ, ರಾಜಕೀಯ ಸಂಗತಿಗಳನ್ನು ಗ್ರಹಿಸಿ ದೇಶ ಮತ್ತು ದೇಶದ ಜನರನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವಲ್ಲಿ ಮೋದಿ ಅವರು ಸಂಪೂರ್ಣವಾಗಿ ವಿಫಲವಾಗಿ, ತಮ್ಮ ಅದೇ ಹಳೇ ಮಾದರಿಯ ಮಾತಿನ ಜಾಣ್ಮೆಯ ಮುಖಾಂತರ ನಾಗರಿಕರಿಗೆ ರಾಷ್ಟ್ರೀಯತೆಯ ಉನ್ಮಾದವನ್ನು ಉಣಬಡಿಸಿ ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ದೇಶದಲ್ಲಿ ಶೇ 90ರಷ್ಟು ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಾರೆ ಎನ್ನುವುದು ಗೊತ್ತಿದ್ದೂ ಮನೆಯಿಂದಲೇ ಕೆಲಸ ಮಾಡಿ, ವಿದೇಶ ಪ್ರವಾಸವನ್ನು ಮುಂದೂಡಿ ಎನ್ನುವ ಸಂಕಥನವನ್ನು ನಾಗರಿಕರ ಮುಂದಿಡುತ್ತಿದ್ದಾರೆ. ಇದು ಬಡಜನರ ವರ್ತಮಾನದ ಬದುಕನ್ನು ವ್ಯಂಗ್ಯ ಮಾಡಿದಂತೆ.

ಮತ್ತೊಂದು, ಚಿನ್ನ ಖರೀದಿ ಮಾಡಬೇಡಿ ಎಂಬ ವಿನಂತಿ. ಅದರ ಜೊತೆಗೆ ಆಮದು ಸುಂಕದಲ್ಲಿ ಹೆಚ್ಚಳ ಬೇರೆ. ನೋಟು ರದ್ದತಿಯ ಸಂದರ್ಭದಲ್ಲಿ ಅಸಂಘಟಿತ ಮತ್ತು ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಯಾವ ರೀತಿಯಲ್ಲಿ ಕಡೆಗಣಿಸಿದ್ದರೋ, ಅದೇ ರೀತಿಯಲ್ಲಿ ಈ ಬಾರಿಯೂ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಕಡೆಗಣಿಸಿದ್ದಾರೆ. ಭಾರತಕ್ಕೆ ಆಮದಾಗುವ ಒಟ್ಟು ಚಿನ್ನದಲ್ಲಿ ಶೇ 55–ಶೇ 58ರಷ್ಟು ಭಾಗವನ್ನು ಗ್ರಾಮೀಣ ಭಾರತದ ಜನರು ಬಳಸಿಕೊಳ್ಳುತ್ತಾರೆ. ನಮ್ಮ ಗ್ರಾಮೀಣ ಆರ್ಥಿಕತೆಯ ಉಳಿತಾಯ, ವ್ಯವಹಾರ, ಮದುವೆ, ಸಂಸ್ಕೃತಿ ಎಲ್ಲವೂ ಚಿನ್ನದ ಮೇಲೆಯೇ ಅವಲಂಬಿತವಾಗಿವೆ. ಚಿನ್ನದ ಮೇಲಿನ ಆಮದು ಸುಂಕದ ಹೆಚ್ಚಳವು ಗ್ರಾಮೀಣ ಜನರ ಬದುಕಿನ ಮೇಲೆ ಬೀರಬಹುದಾದ ಆರ್ಥಿಕ ದುಷ್ಪರಿಣಾಮಗಳ ಕುರಿತು ಮೋದಿ ಅವರು ಊಹೆ ಮಾಡಲು ಸಾಧ್ಯವೇ?

ಇನ್ನೊಂದು, ಪೆಟ್ರೋಲ್, ಡೀಸೆಲ್ ಕಡಿಮೆ ಉಪಯೋಗಿಸಿ ಎಂದು ಹೇಳಿರುವುದು. ರಷ್ಯಾದಿಂದ ರಿಯಾಯಿತಿಯಲ್ಲಿ ಆಮದು ಮಾಡಿಕೊಂಡ ಕಚ್ಚಾತೈಲದ ಲಾಭವನ್ನು ಪ್ರಧಾನಿಯವರು ದೇಶದ ಜನರಿಗೆ ವರ್ಗಾಯಿಸಿದ್ದಾರೆಯೇ ಎನ್ನುವ ಪ್ರಶ್ನೆ ಮೂಡುತ್ತದೆ; ಅಂಬಾನಿ ಅವರಿಗೆ ಸುಮಾರು ₹6,850 ಕೋಟಿ ಲಾಭವಾಗಿದೆಯಲ್ಲಾ ಎನ್ನುವ ಉತ್ತರವೂ ದೊರಕುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಮತ್ತು ಕಂಪನಿಗಳು ಪೆಟ್ರೋಲ್ ಡೀಸೆಲ್ನ ಮುಖಾಂತರ ಲಕ್ಷಾಂತರ ಕೋಟಿ ಆದಾಯ ಗಳಿಸಿವೆ. ಇದರೊಂದಿಗೆ ನೆನಪು ಮಾಡಿಕೊಳ್ಳಬೇಕಾದ ಮತ್ತೊಂದು ಸಂಗತಿಯೆಂದರೆ, 2014ರ ಚುನಾವಣೆಯ ಸಂದರ್ಭದಲ್ಲಿ ರೂಪಾಯಿ ಮೌಲ್ಯವನ್ನು ಮಾರುಕಟ್ಟೆ ನಿರ್ಧರಿಸುತ್ತದೆ ಎನ್ನುವುದು ನಮ್ಮ ಪ್ರಧಾನಿಯವರಿಗೆ ಚೆನ್ನಾಗಿಯೇ ಗೊತ್ತಿದ್ದರೂ ಪ್ರಜ್ಞಾಪೂರ್ವಕವಾಗಿ ರೂಪಾಯಿ ಮೌಲ್ಯವನ್ನು ರಾಷ್ಟ್ರೀಯತೆಯ ಘನತೆಗೆ ತಳಕು ಹಾಕಿ ದೇಶದ ಜನರ ಆರ್ಥಿಕ ವಿವೇಕದ ಜೊತೆಗೆ ರಾಜಕೀಯ ಮಾಡಿದರು. ಕಳೆದ ಒಂದೂವರೆ ವರ್ಷದಿಂದ ರೂಪಾಯಿ ಮೌಲ್ಯ ಕುಸಿಯುತ್ತಿದ್ದರೂ ಆರ್ಥಿಕ ವ್ಯವಸ್ಥೆ ಹದಗೆಡುತ್ತಿದೆ ಎನ್ನುವ ಸತ್ಯವನ್ನು ದೇಶದ ಜನರಿಂದ ಮರೆಮಾಚಿ ಇದೀಗ ಯುದ್ಧದ ಕಾರಣದಿಂದಲೇ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ತಮ್ಮ ಮಾತಿನ ಜಾಣ್ಮೆಯನ್ನು ತೋರಿಸುತ್ತಿದ್ದಾರೆ. ಯುದ್ಧಕ್ಕೂ ಮುಂಚಿನಿಂದಲೇ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿರುವುದರ ಬಗ್ಗೆ ಜನರಿಗೆ ತಿಳಿಸದ ಮೋದಿ ಅವರ ಈ ನಡೆ ರಾಷ್ಟ್ರೀಯತೆಗೆ ಮಾಡುವ ದ್ರೋಹವಲ್ಲವೇ?

ಇದರ ಜತೆಗೆ, ರಸಗೊಬ್ಬರದ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿ ಮಾಡಿ ಎನ್ನುವ ವಿನಂತಿ ಮಾಡಿದ್ದಾರೆ. ಅದರ ಹಿಂದೆ, ಅವರ ಮಾತಿನ ಜಾಣ್ಮೆ ಮತ್ತು ಅಧಿಕಾರದಿಂದ ದೇಶದ ಜನರ ವಿವೇಕವನ್ನು ಅನಾಯಾಸವಾಗಿ ಮಂಕುಗೊಳಿಸಿ, ‘ಜುಮ್ಲಾ’ ರಾಜಕೀಯವನ್ನು ಯಾವುದೇ ಅಡೆತಡೆ ಇಲ್ಲದೇ ಮುಂದುವರಿಸಬಲ್ಲೆ ಎಂಬ ಮನಃಸ್ಥಿತಿ ಸ್ಪಷ್ಟವಾಗಿ ಕಾಣುತ್ತದೆ. ದೇಶ ಎದುರಿಸಿದ ಎಂಥದ್ದೇ ಸಂದರ್ಭಗಳಲ್ಲೂ ಯಾವುದೇ ಹೆಚ್ಚುವರಿ ಶ್ರಮ ಅಥವಾ ಹೂಡಿಕೆ ಇಲ್ಲದೆ ಇಲ್ಲಿನ ಶತಕೋಟ್ಯಧೀಶರು ಸಾವಿರಾರು ಕೋಟಿ ಲಾಭ ಗಳಿಸಿದ್ದಾರೆ. ಪ್ರಭುತ್ವದ ಪ್ರತಿನಿಧಿಯಾದ ಮೋದಿ ಅವರು ರಾಷ್ಟ್ರೀಯತೆಯ ಹೆಸರಿನಲ್ಲಿ ನಾಗರಿಕರ ಆರ್ಥಿಕ ವರ್ತನೆಯನ್ನು ತಮ್ಮ ಮಾತಿನ ಮೋಡಿಯಿಂದ ಬದಲಾಯಿಸಿ, ಹೆಚ್ಚಿನ ಲಾಭ ಗಳಿಸಲು ಶತಕೋಟ್ಯಧೀಶರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆಯೇ ಹೊರತು ಸಾಮಾನ್ಯ ನಾಗರಿಕರಿಗೆ ಯಾವ ವಿಧದಲ್ಲೂ ಅನುಕೂಲ ಮಾಡಿಕೊಟ್ಟಿಲ್ಲ. ಹೀಗೆ ನಾಲ್ಕು ಬಾರಿ ದೇಶದ ಜನರಿಗೆ ಅನ್ಯಾಯ ಮಾಡಿರುವ ಮೋದಿ ಅವರು ಈಗಲಾದರೂ ನೈತಿಕ ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದು ಆಶಿಸೋಣ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-493999411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.