ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರದ್ ಪವಾರ್ ರಾಜೀನಾಮೆಯನ್ನು ತಿರಸ್ಕರಿಸಿದ ಎನ್‌ಸಿಪಿ ಕಮಿಟಿ!

ಹೊಸ ಅಧ್ಯಕ್ಷರ ಆಯ್ಕೆ ಮಾಡಲು ಕಮಿಟಿ ರಚಿಸಿದ್ದ ಶರದ್ ಪವಾರ್
Published 5 ಮೇ 2023, 6:43 IST
Last Updated 5 ಮೇ 2023, 6:43 IST
ಅಕ್ಷರ ಗಾತ್ರ

ಮುಂಬೈ: ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ಅವರು ನೀಡಿರುವ ರಾಜೀನಾಮೆಯನ್ನು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ರಚಿಸಲಾಗಿದ್ದ ಎನ್‌ಸಿಪಿ ಕಮಿಟಿ ಇಂದು ತಿರಸ್ಕಾರ ಮಾಡಿದೆ.

ಹೊಸ ಅಧ್ಯಕ್ಷರ ಆಯ್ಕೆಗೆ 18 ಜನ ಇರುವ ಸಮಿತಿಯನ್ನು ಪ್ರಪುಲ್ ಪಟೇಲ್ ನಾಯಕತ್ವದಲ್ಲಿ ಶರದ್ ಪವಾರ್ ರಚಿಸಿದ್ದರು. ಮುಂಬೈನ ಪಕ್ಷದ ಕಚೇರಿಯಲ್ಲಿ ಇಂದು ಸಭೆ ನಡೆಸಿದ ಈ ಸಮಿತಿ, ಶರದ್ ಪವಾರ್ ಅವರ ರಾಜೀನಾಮೆಯನ್ನು ತಿರಸ್ಕಾರ ಮಾಡಿದೆ.

‘ಶರದ್ ಪವಾರ್ ಅವರೇ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂಬುದು ನಮ್ಮ ನಿಲುವಾಗಿದೆ. ಬೇಕಾದರೆ ಪಕ್ಷಕ್ಕೆ ಕಾರ್ಯಾಧ್ಯಕ್ಷರನ್ನು ಹೊಸಬರನ್ನು ನೇಮಕ ಮಾಡಬಹುದು. ನಾವೆಲ್ಲ ಇಂದು ಪವಾರ್ ಅವರನ್ನು ಭೇಟಿಯಾಗಿ ಈ ವಿಷಯವನ್ನು ಅವರ ಮುಂದಿಡಲಿದ್ದೇವೆ’ ಎಂದು ಪ್ರಪುಲ್ ಪಟೇಲ್ ತಿಳಿಸಿದ್ದಾರೆ.

ಬೆಳಿಗ್ಗೆಯಿಂದಲೇ ಪಕ್ಷದ ಕಚೇರಿ ಮುಂದೆ ಜಮಾಯಿಸಿರುವ ಎನ್‌ಸಿಪಿ ಕಾರ್ಯಕರ್ತರು, ಅಭಿಮಾನಿಗಳು, ಶರದ್ ಪವಾರ್ ಹುದ್ದೆ ತೊರೆಯಬಾರದು ಎಂದು ಆಗ್ರಹಿಸಿದ್ದಾರೆ.

ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ ಘೋಷಿಸಿದ ಎರಡು ದಿನಗಳ ನಂತರ ಅವರ ಉತ್ತರಾಧಿಕಾರಿ ಸ್ಥಾನವನ್ನು ಅಜಿತ್‌ ಪವಾರ್‌ ಅಥವಾ ಸುಪ್ರಿಯಾ ಸುಳೆ ಅಥವಾ ಕುಟುಂಬದ ಹೊರಗಿನವರು ವಹಿಸಿಕೊಳ್ಳಬಹುದಾ? ಎನ್ನುವ ಕುತೂಹಲವನ್ನು ಶುಕ್ರವಾರ ಸಭೆ ಹೆಚ್ಚಿಸಿತ್ತು. ಆದರೆ, ಶರದ್ ಪವಾರ್ ಅವರ ಮುಂದಿನ ನಡೆ ಏನಿರಬಹುದು ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಕಳೆದ 24 ವರ್ಷಗಳಿಂದ ಪ್ರಮುಖ ಪಾತ್ರ ವಹಿಸಿರುವ ಶರದ್‌ ಪವಾರ್ ಅವರು, ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗುತ್ತಿದೆ. ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ತಮ್ಮ ಉತ್ತರಾಧಿಕಾರಿ ಆಯ್ಕೆಗೆ ಅವರು ಸಮಿತಿ ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT