ನವದೆಹಲಿ: ನೀಟ್–ಯುಜಿ 2026ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಬುಧವಾರ ಐವರನ್ನು ಬಂಧಿಸಿದ್ದು, ದೇಶದಾದ್ಯಂತ ವಿವಿಧೆಡೆ ಶೋಧ ನಡೆಸಿದೆ. ಸೋರಿಕೆಯ ಜಾಡು ಹಿಡಿದು ತನಿಖೆಯನ್ನು ಚುರುಕುಗೊಳಿಸಿದೆ.

ಜೈಪುರದಿಂದ ಮೂವರು, ಗುರುಗ್ರಾಮ ಮತ್ತು ನಾಸಿಕ್ನಿಂದ ತಲಾ ಒಬ್ಬರು ಸೇರಿ ಒಟ್ಟು ಐವರು ಆರೋಪಿಗಳನ್ನು ಸಿಬಿಐ ಬಂಧಿಸಿದೆ. ಇನ್ನೂ ಹಲವು ಶಂಕಿತರ ವಿಚಾರಣೆ ನಡೆಯುತ್ತಿದ್ದು, ಅವರನ್ನು ನಂತರ ಬಂಧಿಸಲಾಗುವುದು ಎಂದು ಮೂಲಗಳು ಹೇಳಿವೆ.

ನಾಸಿಕ್ನಲ್ಲಿ ಬಂಧಿತನಾಗಿರುವ ಶುಭಂ ಖೈರ್ನಾರ್ (30) ಎಂಬಾತನನ್ನು ಹೆಚ್ಚಿನ ವಿಚಾರಣೆಗಾಗಿ, ಸ್ಥಳೀಯ ನ್ಯಾಯಾಲಯದಿಂದ ಎರಡು ದಿನಗಳ ಸಂಚಾರ ಅನುಮತಿ (ಟ್ರಾನ್ಸಿಟ್ ರಿಮ್ಯಾಂಡ್) ಪಡೆದು ಸಿಬಿಐ ದೆಹಲಿಗೆ ಕರೆದುಕೊಂಡು ಬಂದಿದೆ. ರಾಜಸ್ಥಾನ ಪೊಲೀಸರ ಮನವಿಯ ಮೇರೆಗೆ ನಾಸಿಕ್ ಪೊಲೀಸರು ಖೈರ್ನಾರ್ನನ್ನು ಮಂಗಳವಾರ ಬಂಧಿಸಿದ್ದರು.

ಶಂಕಿತರಿಂದ ಮೊಬೈಲ್, ಲ್ಯಾಪ್ಟಾಪ್ ಸೇರಿ ಡಿಜಿಟಲ್ ಉಪಕರಣಗಳನ್ನು ವಶಕ್ಕೆ ಪಡೆದಿರುವ ಸಿಬಿಐ, ಪ್ರಶ್ನೆ ಪತ್ರಿಕೆ ವಿತರಿಸಲು ಬಳಸಲಾದ ಅಪ್ಲಿಕೇಶನ್ಗಳ ಪತ್ತೆಗೆ ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.

ಸಿಬಿಐ ತಂಡ ಬುಧವಾರ ನವದೆಹಲಿಯಲ್ಲಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್ಟಿಎ) ಕೇಂದ್ರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನೀಟ್–ಯುಜಿ 2026ರ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾದ ಅಧಿಕಾರಿಗಳ ಜತೆ ಮಾತುಕತೆ ನಡೆಸಿತು. ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿತು.

ಪ್ರಕರಣದ ತನಿಖೆಗಾಗಿ ಎಫ್ಐಆರ್ ದಾಖಲಿಸಿರುವ ಸಿಬಿಐ, ಹಲವು ತಂಡಗಳನ್ನು ರಚಿಸಿದೆ. ಈ ಬಾರಿ ದೇಶದ 551 ಹಾಗೂ ವಿದೇಶದ 14 ಕೇಂದ್ರಗಳಲ್ಲಿ ಸುಮಾರು 23 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷಾ ಅಕ್ರಮ ನಡೆದಿರುವ ಬಗ್ಗೆ ಮೇ 7ರ ಸಂಜೆ ಮಾಹಿತಿ ಲಭಿಸಿತ್ತು ಎಂದು ಎನ್ಟಿಎ ಹೇಳಿದೆ.

ಹೆಸರು ಬಹಿರಂಗಪಡಿಸಿಲ್ಲ: ಮೂಲಗಳ ಪ್ರಕಾರ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರ ‘ಎಸ್ಒಜಿ’ ತಂಡ ಇದುವರೆಗೆ 150ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ಇವರಲ್ಲಿ ಮಂಗಳವಾರ ರಾತ್ರಿ 20ಕ್ಕೂ ಹೆಚ್ಚು ಜನರನ್ನು ಸಿಬಿಐಗೆ ವಿಚಾರಣೆಗಾಗಿ ಹಸ್ತಾಂತರಿಸಿದೆ. ಆದರೆ, ಬಂಧಿತರಲ್ಲಿ ಯಾರ ಹೆಸರನ್ನೂ ಎಸ್ಒಜಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ದೇಶದ ಯುವಜನರು ಹೊಣೆಗಾರಿಕೆ ಕೇಳಬೇಕು. ಬಾಂಗ್ಲಾದೇಶ ನೇಪಾಳ ಮಾದರಿಯಲ್ಲಿ ಭಾರತದಲ್ಲಿ ಜೆನ್ ಝೀ ತಲೆಮಾರಿನವರು ಬೀದಿಗಿಳಿಯಬೇಕು

–ಅರವಿಂದ ಕೇಜ್ರಿವಾಲ್ ಎಎಪಿ ರಾಷ್ಟ್ರೀಯ ಸಂಚಾಲಕ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಗಂಭೀರ ಮತ್ತು ಖಂಡನೀಯ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ವಿಸರ್ಜನೆಯಾಗಬೇಕು

–ಪಿಣರಾಯಿ ವಿಜಯನ್ ನಿರ್ಗಮಿತ ಕೇರಳಂ ಸಿ.ಎಂ

ಸೋರಿಕೆಯ ಹಿಂದೆ ಎಂಬಿಬಿಎಸ್ ವಿದ್ಯಾರ್ಥಿ

ಜೈಪುರ (ಪಿಟಿಐ): ಕೇರಳದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ರಾಜಸ್ಥಾನ ರಾಜ್ಯದ ವಿದ್ಯಾರ್ಥಿ ಮೂಲಕ ನೀಟ್–ಯುಜಿ 2026ರ ಪ್ರಶ್ನೆಗಳಿಗೆ ಹೋಲಿಕೆ ಇದ್ದಂತಹ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡದ (ಎಸ್ಒಜಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿಯು ರಾಜಸ್ಥಾನದ ಸಿಕರ್ನಲ್ಲಿರುವ ತನ್ನ ಸ್ನೇಹಿತರಿಗೆ ಮತ್ತು ಅಲ್ಲಿನ ಹಾಸ್ಟೆಲ್ ಮಾಲೀಕನಿಗೂ ಈ ಪ್ರಶ್ನೆ ಪತ್ರಿಕೆ ಕಳುಹಿಸಿದ್ದ. ಪಿಡಿಎಫ್ ಸ್ವರೂಪದಲ್ಲಿದ್ದ ಈ ಪ್ರಶ್ನೆಪತ್ರಿಕೆಯು ನಂತರ ವಾಟ್ಸ್ಆ್ಯಪ್ ಟೆಲಿಗ್ರಾಂ ಮೂಲಕ ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳ ನಡುವೆ ಹಂಚಿಕೆ ಆಗಿರುವುದು ತನಿಖೆಯಲ್ಲಿ ಕಂಡುಬಂದಿದೆ. ‘ಕೇರಳದಲ್ಲಿದ್ದ ರಾಜಸ್ಥಾನದ ಎಂಬಿಬಿಎಸ್ ವಿದ್ಯಾರ್ಥಿ ಕೈಗೆ ಮೊದಲು ಪ್ರಶ್ನೆಪತ್ರಿಕೆ ಲಭಿಸಿದೆ. ಆತ ಅದನ್ನು ರಾಜಸ್ಥಾನದ ಸ್ನೇಹಿತರಿಗೆ ಕಳುಹಿಸಿದ್ದಾನೆ. ಅಲ್ಲಿಂದ ದೇಶದ ವಿವಿಧೆಡೆ ಹಂಚಿಕೆ ಆಗಿದೆ’ ಎಂದು ತನಿಖಾ ತಂಡದ ಐಜಿ ಅಜಯ್ ಪಾಲ್ ಲಂಬಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸಿಕರ್ನಲ್ಲಿರುವ ಹಾಸ್ಟೆಲ್ ಮಾಲೀಕ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೊದಲು ಈ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದರು. ವಿದ್ಯಾರ್ಥಿಗಳು ಅದನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ‘ವಿದ್ಯಾರ್ಥಿಗಳಿಗೆ ನೀಟ್ ಮಾದರಿ ಪ್ರಶ್ನೆಗಳ ಸಂಗ್ರಹವನ್ನು (ಕ್ವಶ್ಚನ್ ಬ್ಯಾಂಕ್) ವಿತರಿಸಲಾಗಿತ್ತು ಎಂದು ಹಾಸ್ಟೆಲ್ ಮಾಲೀಕ ವಿಚಾರಣೆ ವೇಳೆ ಹೇಳಿದರು. ಈ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವ ಬಗ್ಗೆ ಪೊಲೀಸರಿಗೆ ಸುಳಿವು ಲಭಿಸಿತು’ ಎಂದು ಅಧಿಕಾರಿ ವಿವರಿಸಿದರು.

ಕೇರಳದಿಂದ ಹರಿಯಾಣ ಮೂಲಕ ರಾಜಸ್ಥಾನಕ್ಕೆ

ಕೇರಳದಿಂದ ಸೋರಿಕೆಯಾದ ಪ್ರಶ್ನೆಪತ್ರಿಕೆ ರಾಜಸ್ಥಾನ ತಲುಪುವ ಮೂದಲು ಅದು ಹರಿಯಾಣದ ಗುರುಗ್ರಾಮದ ವ್ಯಕ್ತಿಯೊಬ್ಬರಿಗೆ ರವಾನೆ ಆಗಿದೆ ಎಂದು ಅಧಿಕಾರಿಗಳು ಹೇಳಿದರು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ರಾಜಸ್ಥಾನದ ಸಿಕರ್ ಜುನ್ಜುನು ಅಲ್ವಾರ್ ಜೈಪುರ ನಗರ ಜೈಪುರ ಗ್ರಾಮೀಣ ಠಾಣೆಯ ಪೊಲೀಸರು 150ಕ್ಕೂ ಹೆಚ್ಚು ಅಭ್ಯರ್ಥಿಗಳು ಅವರ ಸ್ನೇಹಿತರು ಮತ್ತು ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮೇ 3ರಂದು ನೀಟ್ ಪರೀಕ್ಷೆಗೂ ಮುನ್ನವೇ ಈ ಪ್ರಶ್ನೆ ಪತ್ರಿಕೆ ರಾಜಸ್ಥಾನದ ಕೆಲವು ವ್ಯಕ್ತಿಗಳ ಕೈಯಲ್ಲಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಕೆಲವರು ಪ್ರಶ್ನೆಪತ್ರಿಕೆ ಸೋರಿಕೆಯ ಸಂಘಟಿತ ಜಾಲದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದ ಶಂಕೆ ಇದ್ದು ವಿಚಾರಣೆ ಮುಂದುವರಿದಿದೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದಲ್ಲಿ ಇದುವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ತನಿಖೆಯ ವಿವರವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಮತ್ತು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಜತೆಗೆ ಹಂಚಿಕೊಳ್ಳಲಾಗಿದೆ ಎಂದು ಲಂಬಾ ಹೇಳಿದರು. ಪ್ರಶ್ನೆ ಪತ್ರಿಕೆಯಲ್ಲಿ ಏನಿತ್ತು? ಸೋರಿಕೆಯಾದ ಪ್ರಶ್ನೆಪತ್ರಿಕೆಯಲ್ಲಿ (ಪಿಡಿಎಫ್ ಫೈಲ್) ರಸಾಯನ ವಿಜ್ಞಾನದ 45 ಹಾಗೂ ಜೀವ ವಿಜ್ಞಾನದ 90 ಪ್ರಶ್ನೆ ಮತ್ತು ಉತ್ತರಗಳಿದ್ದವು. ಇವು ನೀಟ್–ಯುಜಿ 2026ರ ಪ್ರಶ್ನೆ–ಉತ್ತರಗಳಿಗೆ ಹೊಂದಿಕೆಯಾಗಿವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ‘ಪ್ರೈವೆಟ್ ಮಾಫಿಯಾ’ ಎಂಬ ಗುಂಪಿನಲ್ಲಿ ಪಾಸ್ವರ್ಡ್ ರಕ್ಷಣೆಯೊಂದಿಗೆ ಪಿಡಿಎಫ್ ಸ್ವರೂಪದಲ್ಲಿ ಪ್ರಶ್ನೆಪತ್ರಿಕೆ ಹಂಚಿಕೊಳ್ಳಲಾಗಿತ್ತು. ರಾಜಸ್ಥಾನದ ನೀಟ್ ಕೋಚಿಂಗ್ ಸೆಂಟರ್ಗಳಿಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೂ ನೇರ ಸಂಬಂಧ ಇಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಆರೋಪಿ ಬಿಜೆಪಿ ಮುಖಂಡ: ಕಾಂಗ್ರೆಸ್

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಆರೋಪದಡಿ ಬಂಧಿತನಾದ ಒಬ್ಬ ರಾಜಸ್ಥಾನದ ಬಿಜೆಪಿ ಮುಖಂಡ ರಾಜ್ಯ ಸರ್ಕಾರವು ಈ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಮುಖಂಡ ಅಶೋಕ್ ಗೆಹಲೋತ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಬಿಜೆಪಿ ‘ಬಂಧಿತ ಪಕ್ಷದಲ್ಲಿ ಯಾವುದೇ ಹುದ್ದೆ ಹೊಂದಿರಲಿಲ್ಲ’ ಎಂದು ಹೇಳಿದೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶೋಕ್ ಗೆಹಲೋತ್ ‘ಪೊಲೀಸರು ಬಂಧಿಸಿರುವ ದಿನೇಶ್ ಬಿನ್ವಾಲ್ ರಾಜಸ್ಥಾನದ ಬಿಜೆಪಿ ಯುವ ಮೋರ್ಚಾ ಜೈಪುರ ಗ್ರಾಮೀಣ ಘಟಕದ ಕಾರ್ಯದರ್ಶಿ’ ಎಂದು ಬರೆದು ಭಾವಚಿತ್ರವನ್ನೂ ಹಂಚಿಕೊಂಡಿದ್ದಾರೆ. ಬಂಧಿತ ಮಹಿಳೆ ಸಿಬಿಐಗೆ ಹಸ್ತಾಂತರ: ನೀಟ್ ಪಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪುಣೆಯ ಬಿಬ್ವೆವಾಡಿಯಲ್ಲಿ ಬಂಧಿಸಿದ್ದ ಮಹಿಳೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದೇವೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಅಮಿತೇಶ್ ಕುಮಾರ್ ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಮಹಿಳೆಯ ನಿಖರ ಪಾತ್ರದ ಬಗ್ಗೆ ಮಾಹಿತಿ ಲಭಿಸಿಲ್ಲ. ಸುಪ್ರೀಂ ಕೋರ್ಟ್ಗೆ ಅರ್ಜಿ: ನೀಟ್-ಯುಜಿ ಪರೀಕ್ಷಾ ವ್ಯವಸ್ಥೆಯನ್ನು ಪುನರ್ ಪರಿಶೀಲಿಸುವಂತೆ ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ (ಎಫ್ಎಐಎಂಎ) ಸುಪ್ರೀಂ ಕೋರ್ಟ್ಗೆ ಬುಧವಾರ ಅರ್ಜಿ ಸಲ್ಲಿಸಿದೆ. ಪ್ರಧಾನ್ ರಾಜೀನಾಮಗೆ ಒತ್ತಾಯ: ನೀಟ್–ಯುಜಿ ಪರೀಕ್ಷೆ ರದ್ದುಗೊಂಡಿರುವ ಕಾರಣ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಡ ಹೇರಿದೆ.

ಎಸ್ಎಫ್ಐ ಪ್ರತಿಭಟನೆ

ಕೊಲ್ಲಂ (ಪಿಟಿಐ): ನೀಟ್–ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಸಿಪಿಎಂ ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್ಎಫ್ಐ ಕೋಯಿಕ್ಕೋಡ್ ಕಣ್ಣೂರು ಕಾಸರಗೋಡು ಕೊಲ್ಲಂ ಸೇರಿದಂತೆ ರಾಜ್ಯದ ವಿವಿಧೆಡೆ ಬುಧವಾರ ಸರಣಿ ಪ್ರತಿಭಟನೆಗಳನ್ನು ನಡೆಸಿತು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.