ಚೆನ್ನೈ: ತಮಿಳುನಾಡಿನ ಎನ್‌ಸಿಸಿ ಕ್ಯಾಂಪ್‌ವೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಲವು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜತೆಗೆ, ಪ್ರಮುಖ ಆರೋಪಿ ಶಿವರಾಮನ್ ಸೇರಿದಂತೆ ಶಾಲೆಯ ಪ್ರಾಂಶುಪಾಲ, ವರದಿಗಾರ, ಇಬ್ಬರು ಶಿಕ್ಷಕರು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 5ರಿಂದ 9ರವರೆಗೆ ಕೃಷ್ಣಗಿರಿ ಜಿಲ್ಲೆಯ ಬರಗೂರು ಖಾಸಗಿ ಶಾಲೆಯಲ್ಲಿ ಎನ್‌ಸಿಸಿ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ 17 ಬಾಲಕಿಯರು ಸೇರಿದಂತೆ ಒಟ್ಟು 41 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಶಿವರಾಮನ್ 'ನಾಮ್ ತಮಿಳರ್ ಕಚ್ಚಿ' (ಎನ್‌ಟಿಕೆ) ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾನೆ. ಸಂತ್ರಸ್ತ ಬಾಲಕಿಯೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಪೊಲೀಸರು ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (ಡಿಸಿಪಿಒ) ಸರವಣನ್, ಜಿಲ್ಲಾ ಶಿಕ್ಷಣಾಧಿಕಾರಿ ರಮಾದೇವಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ತಿಳಿದಿತ್ತು. ಆದರೆ, ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಗಿತ್ತು ಎಂದು ಸರವಣನ್ ಹೇಳಿದ್ದಾರೆ.